ಪ್ರಕರಣದಲ್ಲಿ ಅನಗತ್ಯ ಜಾತಿ, ಧರ್ಮದ ಉಲ್ಲೇಖ ಬೇಡ: ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ
ಪ್ರಕರಣದಲ್ಲಿ ಅನಗತ್ಯ ಜಾತಿ, ಧರ್ಮದ ಉಲ್ಲೇಖ ಬೇಡ: ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ
ಪ್ರಕರಣದ ದಾಖಲೆಗಳಲ್ಲಿ ಪಕ್ಷಕಾರರು ಜಾತಿ ಮತ್ತು ಧರ್ಮ ಉಲ್ಲೇಖಿಸಬಾರದು ಎಂದು ಸುಪ್ರೀಂ ಕೋರ್ಟ್ ಎಲ್ಲ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೂ ಈ ಬಗ್ಗೆ ಸೂಚನೆ ನೀಡಿದೆ.
ನ್ಯಾ. ಹಿಮಾಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದ್ದು, ಜಾತಿ/ಧರ್ಮ ಉಲ್ಲೇಖಿಸುವ ಪರಿಪಾಠವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ.
ಜಾತಿ ಅಥವಾ ಧರ್ಮ ಉಲ್ಲೇಖಿಸಲು ಯಾವುದೇ ಸಕಾರಣವಿಲ್ಲ. ಇಂತಹ ರೂಢಿಯಿಂದ ಅಂತರ ಕಾಯ್ದಕೊಳ್ಳಬೇಕು, ಮತ್ತು ತಕ್ಷಣದಿಂದ ನಿಲ್ಲಿಸಬೇಕು. ಹೈಕೋರ್ಟ್ ಅಥವಾ ವಿಚಾರಣಾ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಯಾವುದೇ ಅರ್ಜಿ, ದಾವೆ ಇಲ್ಲವೇ ವಿಚಾರಣೆ ವೇಳೆ ಕಕ್ಷಿದಾರರ ದಾಖಲೆ ಪ್ರತಿಗಳಲ್ಲಿ ಅವರ ಜಾತಿ ಯಾ ಧರ್ಮ ಉಲ್ಲೇಖಿಸದಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ರಾಜಸ್ತಾನದ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇರುವ ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದ ವರ್ಗಾವಣೆ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿಯ ಪಕ್ಷಕಾರರಾಗಿದ್ದ ಗಂಡ ಹೆಂಡತಿಯ ಜಾತಿಯನ್ನು ಮೆಮೋದಲ್ಲಿ ಉಲ್ಲೇಖಿಸಲಾಗಿತ್ತು. ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣದ ದಾಖಲೆಗಳಲ್ಲಿ ಈ ವಿವರ ಉಲ್ಲೇಖಿಸಲಾಗಿದೆ. .ಹಾಗಾಗಿ ಸದ್ರಿ ಅರ್ಜಿಯಲ್ಲೂ ಈ ವಿವರವನ್ನು ಕಾಣಿಸದೆ ಬೇರೆ ದಾರಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದರು.
ವಿಚಾರಣಾ ನ್ಯಾಯಾಲಯಗಳಲ್ಲಿ ಇಂತಹ ವಿವರ ಪ್ರಸ್ತಾಪಿಸಿದ್ದರೂ, ಸುಪ್ರೀಂ ಕೋರ್ಟ್ ಮುಂದೆ ಇಂತಹ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ನ್ಯಾಯಪೀಠ ನಿರ್ದಿಷ್ಟವಾಗಿ ಆದೇಶ ಹೊರಡಿಸಿತು. ಈ ನಿರ್ದೇಶನಗಳನ್ನು ತಕ್ಷಣ ಪಾಲಿಸಲು ವಕೀಲರು ಮತ್ತು ನ್ಯಾಯಾಲಯದ ರಿಜಿಸ್ಟ್ರಿಗೆ ತಿಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಹಿಂದೆ, ಅಭಯ್ ಎಸ್. ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಸುಪ್ರೀಂ ನ್ಯಾಯಪೀಠ, ರಾಜಸ್ತಾನದ ಹೈಕೋರ್ಟ್ ಆದೇಶದಲ್ಲಿ ಕಕ್ಷಿದಾರರ ಜಾತಿ ವಿವರ ಉಲ್ಲೇಖಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.