-->
ನ್ಯಾಯಾಂಗ ನಿಂದನೆ: ಕ್ಷಮಾಪಣೆ ಕೇಳಲೊಪ್ಪದ ವಕೀಲರಿಗೆ ಆರು ತಿಂಗಳು ಜೈಲು ಶಿಕ್ಷೆ!

ನ್ಯಾಯಾಂಗ ನಿಂದನೆ: ಕ್ಷಮಾಪಣೆ ಕೇಳಲೊಪ್ಪದ ವಕೀಲರಿಗೆ ಆರು ತಿಂಗಳು ಜೈಲು ಶಿಕ್ಷೆ!

ನ್ಯಾಯಾಂಗ ನಿಂದನೆ: ಕ್ಷಮಾಪಣೆ ಕೇಳಲೊಪ್ಪದ ವಕೀಲರಿಗೆ ಆರು ತಿಂಗಳು ಜೈಲು ಶಿಕ್ಷೆ!





ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಜಿಲ್ಲಾ ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಆರೋಪ ಮಾಡಿದ್ದ ವಕೀಲರಿಗೆ ಹೈಕೋರ್ಟ್ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.


ದೆಹಲಿ ಹೈಕೋರ್ಟ್‌ನ ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ಶಾಲಿಂದರ್ ಕೌರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.


ನ್ಯಾಯಾಂಗ ನಿಂದನೆ ಮಾಡಿದ್ದ ವೀರೇಂದ್ರ ಸಿಂಗ್ ಅವರು ಶಿಕ್ಷೆಗೊಳಗಾದ ವಕೀಲರು. ತಮ್ಮ ಆರೋಪಗಳ ಬಗ್ಗೆ ಕ್ಷಮೆಯಾಚನೆಗೆ ಅವಕಾಶ ನೀಡಲಾಗಿತ್ತು. ಆದರೆ, ಅದನ್ನು ಆರೋಪಿ ವಕೀಲರಾದ ವೀರೇಂದ್ರ ಸಿಂಗ್ ಅವರು ನಿರಾಕರಿಸಿದ್ದರು.


ಆ ಬಳಿಕ, ವಕೀಲರಿಗೆ ಬಟ್ಟೆ ಬದಲಿಸಲು, ಕೋರ್ಟ್ ಅಂಗಳದಲ್ಲಿ ನಿಲ್ಲಿಸಿದ್ದ ತಮ್ಮ ವಾಹನವನ್ನು ಮನೆಗೆ ಬಿಡಲು ಮತ್ತು ಜೈಲಿಗೆ ಕೊಂಡೊಯ್ಯುವಷ್ಟು ಔಷಧಗಳನ್ನು ತರಲು ಅವರಿಗೆ ನ್ಯಾಯಾಲಯ ಅವಕಾಶ ನೀಡಿತು.


ಜುಲೈ 2022ರಲ್ಲಿ ಏಕಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕ್ರಿಮಿನಲ್ ಮೇಲ್ಮನವಿಯಲ್ಲಿ ವಕೀಲರಾದ ವೀರೇಂದ್ರ ಸಿಂಗ್ ಹಲವು ನ್ಯಾಯಾಧೀಶರ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದರು. ಕೆಲವು ನಿರ್ದಿಷ್ಟ ನ್ಯಾಯಾಧೀಶರ ಹೆಸರನ್ನು ಉಲ್ಲೇಖಿಸಿದ್ದ ಅವರು, ಈ ನ್ಯಾಯಾಧೀಶರು ತಮ್ಮ ಮನಸ್ಸಿಗೆ ತೋಚಿದಂತೆ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.



ತಮ್ಮ ಆರೋಪಗಳನ್ನು ವಾಪಸ್ ಪಡೆಯುತ್ತೀರಾ ಎಂದು ಏಕಸದಸ್ಯ ಪೀಠ ಪ್ರಶ್ನೆಗೆ ಅವರು ಸಕಾರಾತ್ಮಕವಾಗಿ ಉತ್ತರ ನೀಡಿರಲಿಲ್ಲ. ಇದು ನ್ಯಾಯಾಂಗ ನಿಂದನೆಯ ಆರೋಪವಲ್ಲ, ಬದಲಿಗೆ ಸತ್ಯಾಂಶ ಇರುವ ವಾಸ್ತವದ ಮಾತುಗಳು ಎಂದು ಪ್ರತಿಕ್ರಿಯೆ ನೀಡಿದ್ದರು.


ಈ ಆರೋಪಗಳು ಪ್ರಕರಣದ ಸಂತ್ರಸ್ತೆ ಖುದ್ದು ಮಾಡಿಲ್ಲ. ಬದಲಾಗಿ ಅವರ ವಕೀಲರಾದ ವೀರೇಂದ್ರ ಸಿಂಗ್ ಅವರ ಸಲಹೆಯ ಮೇರೆಗೆ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿತ್ತು.

ಆದ್ದರಿಂದ ಏಕಸದಸ್ಯ ಪೀಠ ಅವರಿಗೆ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿಗೊಳಿಸಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ನ್ಯಾಯಾಂಗ ನಿಂದನೆಯ ರೋಸ್ಟರ್ ಹೊಂದಿರುವ ವಿಭಾಗೀಯ ಪೀಠದ ಮುಂದೆ ಪ್ರಕರಣರವನ್ನು ಪಟ್ಟಿ ಮಾಡುವಂತೆ ನಿರ್ದೇಶನ ನೀಡಿತ್ತು.


ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ವಿಭಾಗೀಯ ನ್ಯಾಯಪೀಠ, ಸಂತ್ರಸ್ತೆ ಅನುಭವಿಸಿದ ಅನ್ಯಾಯವನ್ನು ಸಾಬೀತು ಮಾಡಲು ವಿಫಲರಾಗಿದ್ದಾರೆ. ಅದರ ಜೊತೆಗೆ ಆರೋಪಿಗಳನ್ನು ಖುಲಾಸೆಗೊಳಿಸಲು ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ತೀರ್ಮಾನಿಸಿ ಶಿಕ್ಷೆಯನ್ನು ಪ್ರಕಟಿಸಿತು.



ಇದೊಂದು ಅಸಂಬದ್ಧ ಆರೋಪವಾಗಿದೆ. ನ್ಯಾಯಾಂಗದ ಮುಂದೆ ಒಬ್ಬ ನ್ಯಾಯಾಲಯದ ಅಧಿಕಾರಿಯಾಗಿ ಇಂತಹ ಮನವಿಯನ್ನು ಕೇಳುವುದು, ಅಥವಾ ಇಂತಹ ಬುನಾದಿ ಇಲ್ಲದ ಆರೋಪಗಳನ್ನು ಮಾಡುವುದು ಗಂಭೀರ ಸ್ವರೂಪದ ಪ್ರಮಾದವಾಗಿದೆ. ಹಾಗಾಗಿ, ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ನ್ಯಾಯಾಲಯದ ಆದ್ಯ ಕರ್ತವ್ಯವಾಗಿದೆ, ಇಲ್ಲದಿದ್ದರೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


Ads on article

Advertise in articles 1

advertising articles 2

Advertise under the article