ಪದೋನ್ನತಿ ಬಳಿಕ ದೊರೆಯದ ವೇತನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೈಕೋರ್ಟ್ ನ್ಯಾಯಮೂರ್ತಿ !
ಪದೋನ್ನತಿ ಬಳಿಕ ದೊರೆಯದ ವೇತನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೈಕೋರ್ಟ್ ನ್ಯಾಯಮೂರ್ತಿ !
ಕಳೆದ ವರ್ಷದ ನವೆಂಬರ್ ನಲ್ಲಿ ಹೈಕೋರ್ಟ್ ವಕೀಲರಾಗಿ ಪದೋನ್ನತಿ ಹೊಂದಿದ ಬಳಿಕ ತಮಗೆ ವೇತನ ದೊರೆತಿಲ್ಲ ಎಂದು ಹೈಕೋರ್ಟ್ ನ್ಯಾಯಾಧೀಶರೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಪಟ್ನಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ರುದ್ರ ಪ್ರಕಾಶ್ ಮಿಶ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನ್ಯಾಯಮೂರ್ತಿ. ಸಾಮಾನ್ಯ ಭವಿಷ್ಯ ನಿಧಿ(GPF) ಖಾತೆ ತೆರೆದು ವೇತನ ನೀಡುವಂತೆ ಅವರು ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆಗೆ ಎತ್ತಿಕೊಂಡಿದ್ದು, ಕೇಂದ್ರ ಸರ್ಕಾರ, ಬಿಹಾರ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಲಾಗಿದ್ದು, ಪಟ್ನಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಮಾಹಿತಿ ಕೇಳಿದೆ.
ನ್ಯಾಯಮೂರ್ತಿ ಮಿಶ್ರಾ ಅವರನ್ನು ವಕೀಲರಾದ ಪ್ರೇಮ್ ಪ್ರಕಾಶ್ ಅವರು ಪ್ರತಿನಿಧಿಸಿದ್ದು, ಮಧ್ಯಂತರ ಪರಿಹಾರ ದೊರಕಿಸುವಂತೆ ನ್ಯಾಯಪೀಠದ ಮುಂದೆ ಭಿನ್ನವಿಸಿಕೊಂಡರು. ಆದರೆ, ಮಧ್ಯಂತರ ಪರಿಹಾರದ ಬದಲು ಮುಖ್ಯ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದ್ದು, ಜನವರಿ 29ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.
ಅಗತ್ಯವಿರುವ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಆದರೂ ಜಿಪಿಎಫ್ ಖಾತೆಯನ್ನು ಮಂಜೂರು ಮಾಡಿಲ್ಲ. ಹಾಗಾಗಿ ನನಗೆ ವೇತನ ದೊರೆಯುತ್ತಿಲ್ಲ. ಈ ಕಾರಣದಿಂದ ನನಗೆ ಬಹಳಷ್ಟು ಮಾನಸಿಕ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಿದೆ ಎಂದು ನ್ಯಾ. ಮಿಶ್ರಾ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ (ಸಂಬಳ ಮತ್ತು ಸೇವಾ ಷರತ್ತುಗಳು) ಕಾಯ್ದೆ ಪ್ರಕಾರ ತಾವು ವೇತನಕ್ಕೆ ಅರ್ಹರಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಸಾಮಾನ್ಯ ಭವಿಷ್ಯ ನಿಧಿ (GPF) ಖಾತೆಯನ್ನು ಮುಚ್ಚಲಾಗಿದೆ ಎಂದು ಪಟ್ನಾ ಹೈಕೋರ್ಟ್‌ನ ಏಳು ನ್ಯಾಯಮೂರ್ತಿಗಳು ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಾಮಾನ್ಯ ಭವಿಷ್ಯ ನಿಧಿ ಖಾತೆಗಳನ್ನು ಮುಚ್ಚಲಾಗಿದೆ ಎಂದು ಕಾನೂನು ಸಚಿವಾಲಯ ಪತ್ರ ಹೊರಡಿಸಿದ್ದು ಇದಕ್ಕೆ ಕಾರಣವಾಗಿತ್ತು. ಆ ಬಳಿಕ, ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಎಲ್ಲ ನ್ಯಾಯಮೂರ್ತಿಗಳಿಗೆ ತಕ್ಷಣ ವೇತನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.
ಪ್ರಕರಣ: ನ್ಯಾ. ರುದ್ರಪ್ರಕಾಶ್ ಮಿಶ್ರಾ Vs ಭಾರತ ಸರ್ಕಾರ ಮತ್ತಿತರರು
ಸುಪ್ರೀಂ ಕೋರ್ಟ್ WP(C) 3/2024