ಅಪೆಕ್ಸ್ ಸಾಲ ಪಡೆದು 439 ಕೋಟಿ ರೂ. ವಂಚನೆ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಮೇಶ ಜಾರಕಿಹೊಳಿ
ಅಪೆಕ್ಸ್ ಸಾಲ ಪಡೆದು 439 ಕೋಟಿ ರೂ. ವಂಚನೆ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಮೇಶ ಜಾರಕಿಹೊಳಿ
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಸಾಲ ಪಡೆದು 439 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿರುವ ಪ್ರಕರಣದಲ್ಲಿ ದಾಖಲಾದ FIR ರದ್ದು ಕೋರಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟೀಸ್ ಜಾರಿಗೊಳಿಸಿದೆ.
ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿ ಹಣ ಸೇರಿ ಒಟ್ಟಿಗೆ 439 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪವನ್ನು ರಮೇಶ ಜಾರಕಿಹೊಳಿ ಎದುರಿಸುತ್ತಿದ್ದಾರೆ.
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಮತ್ತು ನಿರ್ದೇಶಕರಾದ ವಸಂತ ಪಾಟೀಲ ಮತ್ತು ಶಂಕರ ಪಾವಡೆ ಈ ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್‌ನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.
ಸಾಲ ಇರುವ ಸಂದರ್ಭದಲ್ಲಿ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದ್ದರೂ ಅಪೆಕ್ಸ್ ಬ್ಯಾಂಕಿನ ಗಮನಕ್ಕೆ ಬಾರದೆ ಆರೋಪಿಗಳು ಕಂಪೆನಿಯಲ್ಲಿ ಇರುವ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸಂಬಂಧಪಡದ ವ್ಯಕ್ತಿಗಳನ್ನು ಆ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ಈ ಬಗ್ಗೆ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ಬೆಂಗಳೂರಿನ ವಿವಿ ಪುರಂ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.