ವರಮಾನ ಇದ್ದರೂ ವೃದ್ಧ ತಂದೆ-ತಾಯಿಯ ಜವಾಬ್ದಾರಿ ಮಗನ ಕರ್ತವ್ಯ: ಹೈಕೋರ್ಟ್
ವರಮಾನ ಇದ್ದರೂ ವೃದ್ಧ ತಂದೆ-ತಾಯಿಯ ಜವಾಬ್ದಾರಿ ಮಗನ ಕರ್ತವ್ಯ: ಹೈಕೋರ್ಟ್
ವಯೋವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮಗನ ಪವಿತ್ರ ಕರ್ತವ್ಯ. ಅವರಿಗೆ ವರಮಾನ ಇದೆ ಎಂದ ಮಾತ್ರಕ್ಕೆ ಪುತ್ರ ತನ್ನ ಈ ಜವಾಬ್ದಾರಿಯಿಂದ ಮುಕ್ತನಾಗಲಾರ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಾರ್ಖಂಡ್ ಹೈಕೋರ್ಟ್‌ನ ನ್ಯಾ. ಸುಭಾಶ್ ಚಂದ್ರ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ತಂದೆ ಸಂಪಾದನೆ ಮಾಢುತ್ತಿದ್ದಾರೆ. ಅವರಿಗೆ ಆರ್ಥಿಕ ಮೂಲ ಇದೆ ಎಂದು ಮಗನ ಪರ ವಕೀಲರು ವಾದಿಸಿದ್ದರೂ, ಹಿಂದೂ ಧರ್ಮ ಗ್ರಂಥಗಳನ್ನು ಉಲ್ಲೇಖಿಸಿದ ನ್ಯಾಯಪೀಠ ಪೋಷಕರ ಮಹತ್ವವನ್ನು ಒತ್ತಿಹೇಳಿ, ವರಮಾನ ಇದ್ದರೂ ತಂದೆ-ತಾಯಿಯನ್ನು ಪೋಷಿಸುವ ಕರ್ತವ್ಯ ಮಕ್ಕಳದ್ದು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ತನ್ನ ತಂದೆಗೆ ಮಾಸಿಕ ಜೀವನಾಂಶವಾಗಿ ರೂ. 3000/- ಪಾವತಿಸುವಂತೆ ಸೂಚಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮನೋಜ್ ಕುಮಾರ್ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ತನ್ನ ಇಬ್ಬರು ಮಕ್ಕಳಿಗೆ ಜಮೀನು ಪಾಲು ಮಾಡಿ ಕೊಟ್ಟಿದ್ದೇನೆ. ಹಿರಿಯ ಮಗ ಐದು ವರ್ಷಗಳಿಂದ ತಮ್ಮನ್ನು ನೋಡಿಕೊಳ್ಳುತ್ತಿದ್ದರೆ, ಕಿರಿಯ ಮಗ ಮನೋಜ್ ಕುಮಾರ್ ತನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ತಂದೆ ದಿಯೋಕಿ ಸಾವೋ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರತ್ಯೇಕವಾಗಿ ವಾಸಿಸುತ್ತಿರುವ ಮನೋಜ್ ತನಗೆ ರೂ. 10,000/- ಮಾಸಿಕ ಜೀವನಾಂಶ ನೀಡಬೇಕು ಎಂದು ಅವರು ಕೋರಿಕೊಂಡಿದ್ದರು.
ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಎದುರುದಾರ ಪುತ್ರನು ತನ್ನ ತಂದೆಗೆ ಮಾಸಿಕ ಜೀವನಾಂಶವಾಗಿ ರೂ. 3000/- ಪಾವತಿಸುವಂತೆ ಸೂಚಿಸಿ ಆದೇಶ ಹೊರಡಿಸಿತ್ತು.
ಪ್ರಕರಣ: ಮನೋಜ್ ಕುಮಾರ್ @ ಮನೋಜ್ ಸಾವೋ Vs ಜಾರ್ಖಂಡ್ ಸರ್ಕಾರ ಮತ್ತು ಇತರರು
ಜಾರ್ಖಂಡ್ ಹೈಕೋರ್ಟ್, Crl.R. 535/2023 Dated 5-01-2024