-->
ನೌಕರರು ಸರಕಾರದ ಜೀತದಾಳಲ್ಲ, ಕಿಡಿಗೇಡಿಗಳಿಂದ ಪ್ರಾಮಾಣಿಕ ಉದ್ಯೋಗಿಗಳ ರಕ್ಷಣೆ ಅಗತ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನೌಕರರು ಸರಕಾರದ ಜೀತದಾಳಲ್ಲ, ಕಿಡಿಗೇಡಿಗಳಿಂದ ಪ್ರಾಮಾಣಿಕ ಉದ್ಯೋಗಿಗಳ ರಕ್ಷಣೆ ಅಗತ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

  • ನೌಕರರು ಸರಕಾರದ ಜೀತದಾಳಲ್ಲ

  • ಕಿಡಿಗೇಡಿಗಳಿಂದ ಪ್ರಾಮಾಣಿಕ ನೌಕರರ ರಕ್ಷಣೆ ಅಗತ್ಯ

  • ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಸಾರ್ವಜನಿಕ ಉದ್ಯೋಗದಲ್ಲಿರುವ ವ್ಯಕ್ತಿಗಳು ಸರಕಾರದ ಜೀತದಾಳುಗಳಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಲು ಸರಕಾರ ಅಥವಾ ಉನ್ನತ ಶ್ರೇಣಿಯ ಅಧಿಕಾರಿಗಳು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಭ್ರಷ್ಟಾಚಾರ ಅಥವಾ ಲಂಚದ ಸುಳ್ಳು ಪ್ರಕರಣಗಳನ್ನು ದುರುದ್ದೇಶದಿಂದ ದಾಖಲಿಸುವ ಕಿಡಿಗೇಡಿಗಳಿಂದ ಪ್ರಾಮಾಣಿಕ ಸರಕಾರಿ ನೌಕರರಿಗೆ ರಕ್ಷಣೆ ನೀಡಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ಎಸ್. ದೀಕ್ಷಿತ್ ಮತ್ತು ಶ್ರೀ ಜಿ. ಬಸವರಾಜ್ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು "ಪಿ.ವಿ.ರುದ್ರಪ್ಪ Vs ಕರ್ನಾಟಕ ಸರಕಾರ ಮತ್ತೊಬ್ಬರು" ಈ ಪ್ರಕರಣದಲ್ಲಿ ದಿನಾಂಕ 30.1.2024 ರಂದು ಮಹತ್ವದ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ. ದಾವಣಗೆರೆ ಜಿಲ್ಲೆಯ ಕೊಡಗನ್ನೂರು ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿಯಾಗಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಿ.ವಿ. ರುದ್ರಪ್ಪ ಎಂಬುವರು ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಚಂದ್ರಪ್ಪ ಎಂಬವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಾಯಕೊಂಡ ಹೋಬಳಿಯ ಜಂಪೇನಹಳ್ಳಿ ಭಾಗ್ಯಮ್ಮ ಕೋಂ ಚಂದ್ರಪ್ಪ ಮತ್ತು ಎಲ್ಲಮ್ಮ ಕೋಂ ಮಹಂತೇಶ ಇವರು ದಿನಾಂಕ 10.06.2011 ರಂದು ಖಾತೆ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.


ಖಾತೆ ಬದಲಾವಣೆ ಮಾಡಿಕೊಡಲು ಪಿ.ವಿ. ರುದ್ರಪ್ಪ ಅವರು ರೂಪಾಯಿ 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. 500 ರೂಪಾಯಿ ಮುಂಗಡ ನೀಡಲಾಗಿದೆ. ಉಳಿದ ಮೊತ್ತವನ್ನು ನೀಡಲು ತಮಗೆ ಇಷ್ಟವಿಲ್ಲದ ಕಾರಣ ಲೋಕಾಯುಕ್ತ ಪೊಲೀಸರು ಆರೋಪಿ ಪಿ.ವಿ. ರುದ್ರಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಂದ್ರಪ್ಪ ಅವರು ದೂರು ಸಲ್ಲಿಸಿದರು.


ಚಂದ್ರಪ್ಪ ಅವರ ದೂರನ್ನು ಸ್ವೀಕರಿಸಿದ ದಾವಣಗೆರೆಯ ಲೋಕಾಯುಕ್ತ ಪೊಲೀಸರು ಅಪರಾಧ ಕ್ರಮ ಸಂಖ್ಯೆ 6/2011ರಡಿ ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ಪ್ರಥಮ ವರ್ತಮಾನ ವರದಿ ಸಿದ್ಧಪಡಿಸಿದರು. ದಿನಾಂಕ 8.7.2011 ರಂದು ಆರೋಪಿಯನ್ನು ಬಲೆಗೆ ಬೀಳಿಸಲು ಜಾಲ ಹೆಣೆದ ಲೋಕಾಯುಕ್ತ ಪೊಲೀಸರು ಫಿನಾಫ್ತಲಿನ್ ಪೌಡರ್ ಸವರಿದ 500 ರೂಪಾಯಿಗಳ ಎಂಟು ನೋಟುಗಳನ್ನು ಚಂದ್ರಪ್ಪ ಅವರಿಗೆ ನೀಡಿದರು.


ಲೋಕಾಯುಕ್ತ ಪೊಲೀಸರ ನಿರ್ದೇಶನದಂತೆ ಚಂದ್ರಪ್ಪ ಅವರು ಸದರಿ ನೋಟುಗಳನ್ನು ಆರೋಪಿ ರುದ್ರಪ್ಪ ಅವರಿಗೆ ನೀಡಿದರು. ಕೂಡಲೇ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ಆರೋಪಿಯ ಬಳಿ ಇದ್ದ ನೋಟುಗಳನ್ನು ವಶಪಡಿಸಿ ಆತನ ಕೈಗಳನ್ನು ಸೋಡಿಯಂ ಕಾರ್ಬೋನೇಟ್ ದ್ರಾವಣಕ್ಕೆ ಮುಳುಗಿಸಿದಾಗ ಅದು ನೇರಳೆ ಬಣ್ಣಕ್ಕೆ ಪರಿವರ್ತಿತವಾಯಿತು. ತಮ್ಮ ದಾಳಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯಕ್ಕೆ ಬಂದ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿ ದಾವಣಗೆರೆಯ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪಿ ಪಿ ವಿ ರುದ್ರಪ್ಪ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದರು.


ಆರೋಪವನ್ನು ಅವಗಾಹನಿಸಿದ ನ್ಯಾಯಾಲಯವು ವಿಶೇಷ ಪ್ರಕರಣ ಸಂಖ್ಯೆ 3/12ರ ಪ್ರಕಾರ ಪ್ರಕರಣವನ್ನು ದಾಖಲಿಸಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿತು. ಆರೋಪಿಯು ಲಂಚಕ್ಕೆ ಬೇಡಿಕೆ ಇಟ್ಟ ಅಂಶ ವಿಚಾರಣೆಯಲ್ಲಿ ಸಾಬೀತಾಗದ ಹಿನ್ನೆಲೆಯಲ್ಲಿ ಆರೋಪಿ ಪಿ.ವಿ. ರುದ್ರಪ್ಪ ಅವರನ್ನು ನ್ಯಾಯಾಲಯವು ದಿನಾಂಕ 30.1.2017 ರಂದು ದೋಷ ಮುಕ್ತಗೊಳಿಸಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ವಿ. ರುದ್ರಪ್ಪ ಅವರ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾದ ಕಾರಣ ಗ್ರಾಮೀಣ ಅಭಿವೃದ್ಧಿ ಇಲಾಖೆಯು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿತು. ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥ ನೌಕರ ಪಿ.ವಿ‌. ರುದ್ರಪ್ಪ ಅವರ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾಗಿದೆ ಎಂಬ ನಿಷ್ಕರ್ಷೆಗೆ ಬಂದ ವಿಚಾರಣಾಧಿಕಾರಿಯ ವರದಿಯನ್ನು ಅಂಗೀಕರಿಸಿದ ಶಿಸ್ತುಪಾಲನಾಧಿಕಾರಿಯವರು ದಿನಾಂಕ 24.5.2019 ರಂದು ಆದೇಶ ಹೊರಡಿಸಿ ಪಿ.ವಿ. ರುದ್ರಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿದರು.


ಸದರಿ ಆದೇಶದಿಂದ ಭಾದಿತರಾದ ಪಿ.ವಿ. ರುದ್ರಪ್ಪ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಮೇಲ್ಮನವಿ ಸಂಖ್ಯೆ 3668/19 ಅನ್ನು ದಾಖಲಿಸಿದರು. ಸದರಿ ಮೇಲ್ಮನವಿಯನ್ನು ದಿನಾಂಕ 10.2.2020 ರಂದು ಕೆ.ಎ.ಟಿ. ವಜಾಗೊಳಿಸಿತು.


ಕೆ.ಎ.ಟಿ. ಆದೇಶದಿಂದ ಬಾಧಿತರಾದ ಪಿ.ವಿ.ರುದ್ರಪ್ಪ ಅವರು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಂಖ್ಯೆ 9642/2020 ಅನ್ನು ದಾಖಲಿಸಿದರು. ರಿಟ್ ಅರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.


ಅರ್ಜಿದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಪೂರ್ಣ ಪ್ರಮಾಣದ ವಿಚಾರಣೆ ನಡೆದು ಅರ್ಜಿದಾರ ಪಿ.ವಿ‌. ರುದ್ರಪ್ಪ ಅವರನ್ನು ಮಾನ್ಯ ನ್ಯಾಯಾಲಯವು ಅವರ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳಿಂದ ಬಿಡುಗಡೆಗೊಳಿಸಿದೆ. ರಿಟ್ ಅರ್ಜಿದಾರರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಎಂಬ ಅಂಶ ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದೆ.


ಆರೋಪಗಳಿಂದ ಗೌರವಯುತವಾಗಿ ದೋಷಮುಕ್ತರಾದ ಅರ್ಜಿದಾರರ ಪ್ರಕರಣವನ್ನು ಬಿಡುಗಡೆಗೊಂಡ ಆದೇಶದ ಬೆಳಕಿನಲ್ಲಿ ಹೊಸದಾಗಿ ಪರಿಗಣಿಸಬೇಕೆಂದು ಕೆಎಟಿ ಅರ್ಜಿ ಸಂಖ್ಯೆ 1864-17ರಲ್ಲಿ ದಿನಾಂಕ 25.2.2017ರಂದು ನೀಡಿದ ಆದೇಶವನ್ನು ಇಲಾಖಾ ವಿಚಾರಣೆಯಲ್ಲಿ ಪರಿಗಣಿಸದೆ ಶಿಸ್ತುಪಾಲನಾಧಿಕಾರಿಯವರು ಹೊರಡಿಸಿದ ವಜಾ ಆದೇಶ ಕಾನೂನಿನಡಿ ಊರ್ಜಿತವಲ್ಲ.

ಆದುದರಿಂದ ಅರ್ಜಿದಾರರನ್ನು ವಜಾಗೊಳಿಸಿ ಶಿಸ್ತು ಪಾಲನಾಧಿಕಾರಿ ಹೊರಡಿಸಿದ ಆದೇಶವನ್ನು ಹಾಗೂ ಸದರಿ ಆದೇಶವನ್ನು ಸಮರ್ಥಿಸಿದ ಕೆಎಟಿ ಆದೇಶವನ್ನು ರದ್ದುಪಡಿಸಬೇಕೆಂದು ಪ್ರಾರ್ಥಿಸಿದರು.


ಎದುರುದಾರ ಸರಕಾರದ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು;

ಆರೋಪಿಯ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ಹಾಗೂ ಇಲಾಖಾ ವಿಚಾರಣೆ ಪ್ರಕ್ರಿಯೆಗಳು ಸಂಪೂರ್ಣವಾಗಿ ವಿಭಿನ್ನವಾಗಿದ್ದು ಸ್ವತಂತ್ರ ವಿಚಾರಣೆಗಳಾಗಿವೆ. ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ನಡೆದು ಆರೋಪಿ ದೋಷ ಮುಕ್ತನಾದರೂ ಇಲಾಖಾ ವಿಚಾರಣೆಯನ್ನು ಮುಂದುವರಿಸಲು ಕಾನೂನಿನಡಿ ಯಾವುದೇ ತೊಡಕಿಲ್ಲ‌. ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥ ನೌಕರನ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವಿಚಾರಣಾಧಿಕಾರಿಯು ನೀಡಿದ ವರದಿಯನ್ನು ಒಪ್ಪಿಕೊಂಡ ಶಿಸ್ತು ಪ್ರಾಧಿಕಾರವು ರಿಟ್ ಅರ್ಜಿದಾರರನ್ನು ತಪ್ಪಿತಸ್ಥ ಎಂದು ಕಂಡುಕೊಂಡಿದೆ. ಹಾಗೂ ಸೇವೆಯಿಂದ ವಜಾಗೊಳಿಸುವ ದಂಡನೆ ವಿಧಿಸಿದೆ. ಈ ಆದೇಶವನ್ನು ಪರಿಶೀಲಿಸಿ, ಕೆಎಟಿ ಅರ್ಜಿದಾರರ ಮೇಲ್ಮನವಿಯನ್ನು ತಿರಸ್ಕರಿಸಿದೆ. ಸೀಮಿತ ಮೇಲ್ವಿಚಾರಣಾ ನ್ಯಾಯ ವ್ಯಾಪ್ತಿಯನ್ನು ಚಲಾಯಿಸುವ ರಿಟ್ ನ್ಯಾಯಾಲಯವು ದೋಷಪೂರಿತ ಆದೇಶಗಳ ಆಳವಾದ ಪರೀಕ್ಷೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಆದುದರಿಂದ ರಿಟ್ ಅರ್ಜಿಯನ್ನು ವಜಾಗೊಳಿಸಬೇಕಾಗಿ ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯ ಪೀಠವು ಈ ಕೆಳಗಿನಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಲೋಕಾಯುಕ್ತ ಪ್ರಕರಣದಲ್ಲಿ ಆರೋಪಿಯನ್ನು ಪೂರ್ಣ ಪ್ರಮಾಣದ ವಿಚಾರಣೆಯ ಬಳಿಕ ದೋಷಮುಕ್ತಗೊಳಿಸಲಾಗಿದೆ. ಇಂತಹ ಸನ್ನಿವೇಶಗಳಡಿ ಕೈಗೊಳ್ಳುವ ವಿಚಾರಣೆಯಲ್ಲಿ ತಪ್ಪಿತಸ್ಥ ನೌಕರರನ್ನು ಶಿಕ್ಷಿಸುವುದು ಒಂದು ರೀತಿಯಲ್ಲಿ ಸಂವಿಧಾನದ ವಿಧಿ 20 (2)ರಲ್ಲಿ ಹೇಳಲಾದ ಡಬ್ಬಲ್ ಜಿಯೋಪಾರ್ಡಿ ಸಿದ್ಧಾಂತಕ್ಕೆ ಹೋಲಿಸಬಹುದು. ಶಿಸ್ತಿನ ವಿಚಾರಣೆ ಅರೆ ನ್ಯಾಯಿಕ ಪ್ರಕ್ರಿಯೆಯಾಗಿದೆ.


ನ್ಯಾಯಿಕ ಅಥವಾ ಅರೆ ನ್ಯಾಯಿಕ ಪ್ರಕ್ರಿಯೆಗಳ ಅಂತಿಮ ಉದ್ದೇಶವೇನೆಂದರೆ ಸತ್ಯ ಹಾಗೂ ವಾಸ್ತವವನ್ನು ಕಂಡುಹಿಡಿಯುವುದು ಮತ್ತು ಅದರ ಆಧಾರದ ಮೇಲೆ ಕಾನೂನಿಗೆ ಅನುಸಾರವಾಗಿ ಪಕ್ಷಕಾರರಿಗೆ ನ್ಯಾಯವನ್ನು ಒದಗಿಸುವುದು. ಸಾರ್ವಜನಿಕ ಸೇವೆಯನ್ನು ನೀಡಲು ಲಂಚದ ಬೇಡಿಕೆ ಮತ್ತು ಸ್ವೀಕಾರದ ಆರೋಪಗಳನ್ನು ಪ್ರಾಥಮಿಕವಾಗಿ ರುಜುವಾತು ಪಡಿಸಲು ಯಾವುದೇ ಪುರಾವೆ ಇಲ್ಲದಿರುವ ಅಂಶವನ್ನು ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಕ್ರಿಮಿನಲ್ ಪ್ರಕರಣದಲ್ಲಿ ಸಾಕ್ಷಿಯಾಗಿ ದೂರುದಾರರು ನೀಡಿದ ಹೇಳಿಕೆಯನ್ನು ನಿರ್ಲಕ್ಷಿಸಿ, ಇಲಾಖಾ ವಿಚಾರಣೆಯಲ್ಲಿ ನೀಡಿದ ಹೇಳಿಕೆಯನ್ನು ಮನ್ನಿಸಬೇಕೆಂಬ ಸರಕಾರಿ ವಕೀಲರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಾರ್ವಜನಿಕ ಸೇವೆಯಲ್ಲಿರುವ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಾಗ ಇಲಾಖೆಗಳು ಪಾರದರ್ಶಕ ಮತ್ತು ಮಾನವೀಯ ನಡೆ ಹೊಂದಿರಬೇಕು. ನೌಕರರು ಯಾವ ಸರಕಾರಗಳ ಗುಲಾಮರೂ ಅಲ್ಲ. ನಮ್ಮ ವ್ಯವಸ್ಥೆ ಈಸ್ಟ್ ಇಂಡಿಯಾ ಕಂಪನಿ ಅಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.


ಆರೋಪ ಹೊರಿಸುವ ಮುನ್ನ ಕೂಲಂಕಶವಾಗಿ ತನಿಖೆ ನಡೆಸಬೇಕಿತ್ತು. ಆದರೆ ಇವರೆಲ್ಲ ಸತ್ಯಮೇವ ಜಯತೆ ಎಂಬ ವಾಕ್ಯವನ್ನೇ ಮರೆತಂತಿದೆ. ಈ ಪ್ರಕರಣದಲ್ಲಿ ಅರ್ಜಿದಾರರನ್ನು ದುರುದ್ದೇಶದಿಂದ ಸಿಲುಕಿಸಿರುವುದು ಕಂಡು ಬರುತ್ತದೆ. ರುದ್ರಪ್ಪ ಲಂಚ ಪಡೆದಿರುವುದಕ್ಕೆ ಎಲ್ಲೂ ಸಾಕ್ಷ್ಯಗಳಿಲ್ಲ. ನಿಯಮಾನಸಾರ ಮ್ಯುಟೇಶನ್ ಶುಲ್ಕ ಪಡೆದಿದ್ದಾರೆ. ಫಿರ್ಯಾದಿದಾರರು ಮಾಡಿರುವ ಆಪಾದನೆಯಂತೆ ಲಂಚ ಪಡೆದಿದ್ದಾರೆ ಅಥವಾ ಬೇಡಿಕೆ ಇರಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ವಿಫಲರಾಗಿದ್ದಾರೆ‌. ಈ ಪ್ರಕರಣದಲ್ಲಿ ಫಿರ್ಯಾದುದಾರರು ದ್ವೇಷದಿಂದ ದೂರು ನೀಡಿದ್ದಾರೆ ಎಂಬುದಾಗಿ ತಿಳಿದು ಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


ವಾದ-ಪ್ರತಿವಾದ ಆಲಿಸಿದ ಬಳಿಕ ರಿಟ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠವು ರಿಟ್ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಿದ ಸರಕಾರದ ಆದೇಶವನ್ನು ರದ್ದುಪಡಿಸಿತು. ಪಿ. ವಿ. ರುದ್ರಪ್ಪ ಅವರಿಗೆ ಕಾನೂನು ಪ್ರಕಾರ ಅವರ ಸೇವಾ ನಿವೃತ್ತಿ ತನಕ ಸಲ್ಲಬೇಕಾದ ಸಂಬಳ, ನಂತರದ ಪಿಂಚಣಿ ಸೇರಿ ಕಾನೂನು ಬದ್ಧವಾದ ಎಲ್ಲಾ ಸೌಲಭ್ಯಗಳನ್ನು ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆದೇಶಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ






Ads on article

Advertise in articles 1

advertising articles 2

Advertise under the article