ರಾಜ್ಯಾದ್ಯಂತ ಪೌತಿ ಪಹಣಿಗೆ ಬೃಹತ್ ಲೋಕ ಅದಾಲತ್: ಕಂದಾಯ ಇಲಾಖೆ ಚಿಂತನೆ
ರಾಜ್ಯಾದ್ಯಂತ ಪೌತಿ ಪಹಣಿಗೆ ಬೃಹತ್ ಲೋಕ ಅದಾಲತ್: ಕಂದಾಯ ಇಲಾಖೆ ಚಿಂತನೆ
ಮೃತರ ಹೆಸರಲ್ಲೇ ಉಳಿದಿರುವ ಪಹಣಿ (ಆರ್‌ಟಿಸಿ) ಗಳನ್ನು ವಾರಸುದಾರರ ಹೆಸರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ರಾಜ್ಯಮಟ್ಟದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಸಲಿದೆ.
ನೋಂದಣಿ ಸಮಯದಲ್ಲಿ ಆಗುವ ಅಕ್ರಮಗಳನ್ನು ತಡೆಯುವುದು ಮತ್ತು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸಲು ಇಲಾಖೆ ಮುಂದಾಗಿದೆ.
ನನ್ನ ಆಸ್ತಿ ಅಭಿಯಾನ
ಪಹಣಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯ ಚುರುಕು ಪಡೆದುಕೊಂಡಿದೆ. ನನ್ನ ಆಸ್ತಿ ಅಭಿಯಾನ ಎಂಬ ಹೆಸರಿನ ಈ ಯೋಜನೆಯಡಿಯಲ್ಲಿ ಪ್ರಾಯೋಗಿಕವಾಗಿ ಸಂಗ್ರಹಿಸಿಲಾದ 19 ಲಕ್ಷ ಪಹಣಿಗಳಲ್ಲಿ 6 ಲಕ್ಷ ಪಹಣಿಗಳು ಮೃತ ಹೆಸರಿನಲ್ಲೇ ಇರುವುದು ಗಮನಕ್ಕೆ ಬಂದಿದೆ.
ರಾಜ್ಯದಲ್ಲಿ ಈಗಾಗಲೇ 1.87 ಕೋಟಿ ಪಹಣಿ ಪತ್ರಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಸಂಗ್ರಹಿಸಿದರೆ ಪೌತಿ ಪಹಣಿಗಳ ನಿಖರ ಸಂಖ್ಯೆ ತಿಳಿದುಬರಲಿದೆ.
ಮೃತರ ಹೆಸರಲ್ಲಿ ಪಹಣಿ ಇದ್ದರೆ ದುರ್ಬಳಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಲೋಕ ಅದಾಲತ್ ಮೂಲಕ ಇಂತಹ ಪಹಣಿಗಳನ್ನು ಅದರ ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡಲಿದೆ.
ಆಸ್ತಿಗಳ ನೋಂದಣಿ ಸಮಯದಲ್ಲಿ ಆಧಾರ್ ಕಡ್ಡಾಯ ಮಾಡಲಾಗಿದೆ. ನೋಂದಣಿಯಾದ ತಕ್ಷಣ ಆ ಆಸ್ತಿಗೆ ಆಧಾರ್ ಜೋಡಣೆಯಾಗಲಿದೆ. ಇದರಿಂದ ಆಸ್ತಿಗಳ ಕಬಳಿಕೆ, ವಂಚನೆ ತಪ್ಪಲಿದೆ.
ಸಾರ್ವಜನಿಕರು ಕಂದಾಯ ಇಲಾಖೆಯ ಕಚೇರಿಗೆ ತೆರಳಿ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬಹುದು.