ದೂರು ನೀಡಲು ಬಂದಿದ್ದ ಸಂತ್ರಸ್ತೆ ಮೇಲೆ ಅತ್ಯಾಚಾರ: ಆರೋಪಿ ಪೊಲೀಸ್ ಕಾನ್ಸ್‌ಟೆಬಲ್‌ಗೆ ದಂಡ ವಿಧಿಸಿದ ಹೈಕೋರ್ಟ್
ದೂರು ನೀಡಲು ಬಂದಿದ್ದ ಸಂತ್ರಸ್ತೆ ಮೇಲೆ ಅತ್ಯಾಚಾರ: ಆರೋಪಿ ಪೊಲೀಸ್ ಕಾನ್ಸ್‌ಟೆಬಲ್‌ಗೆ ದಂಡ ವಿಧಿಸಿದ ಹೈಕೋರ್ಟ್
ಠಾಣೆಗೆ ದೂರು ನೀಡಿಲು ಬಂದಿದ್ದ ಸಂತ್ರಸ್ತೆಯನ್ನು ದುರ್ಬಳಕೆ ಮಾಡಿದ್ದ ಪೊಲೀಸ್ ಅಧಿಕಾರಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಮಹಾದೇವಪುರ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಫಕೀರಪ್ಪ ಹಟ್ಟಿ ಎಂಬಾತನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಅಪರಾಧಿ ಪೊಲೀಸಪ್ಪ ತಾನಿದ್ದ ಠಾಣೆಗೆ ದೂರು ನೀಡಿಲು ಬಂದಿದ್ದ ಅತ್ಯಾಚಾರ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿದ್ದಾನೆ.
ಫೋನ್ ಸಂಪರ್ಕ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ಈತ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ನ್ಯಾಯಪೀಠ, ಆರೋಪಿ ಫಕೀರಪ್ಪನನ್ನು ಕೂಡಲೇ ವಶಕ್ಕೆ ಪಡೆಯುವಂತೆ ಡಿಸಿಪಿಗೆ ಆದೇಶ ನೀಡಿದೆ.
ಆರೋಪಿಗೆ ವಿಧಿಸಿರುವ ದಂಡ ಮೊತ್ತವನ್ನು ಎರಡು ವಾರಗಳ ಒಳಗಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸದೇ ಇದ್ದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ನ್ಯಾಯಪೀಠ ಆದೇಶ ನೀಡಿದೆ.
ಆರೋಪಿ ಸಂತ್ರಸ್ತೆಯನ್ನು ಬೆದರಿಸಿ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದಾನೆ. ನ್ಯಾಯಾಲಯದ ಆದೇಶವನ್ನೂ ಪಾಲಿಸಿಲ್ಲ. ವಾಸ್ತವ ಸಂಗತಿಗಳನ್ನು ಮುಚ್ಚಿಟ್ಟು ನ್ಯಾಯಾಲಯಗಳನ್ನು ಹಾದಿ ತಪ್ಪಿಸಿದ್ದಾನೆ. ಇದು ಕಾನೂನಿನ ಸ್ಪಷ್ಟ ದುರುಪಯೋಗ. ಈ ಕಾರಣದಿಂದ ಆರೋಪಿ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಘಟನೆ ಏನು?
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಫಕೀರಪ್ಪ ಹಟ್ಟಿ ಎಂಬವರು ಮಹಾದೇವಪುರ ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿದ್ದರು. ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಠಾಣೆಗೆ ಬಂದಿದ್ದ ಸಂತ್ರಸ್ತೆಯ ಜೊತೆಗೆ ಸ್ನೇಹ ಸಂಪಾದಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಮತ್ತು 2019ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ಎಸಗಿದ್ದ.
ಈ ಬಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಲಿಲ್ಲ. ಹೀಗಾಗಿ ಸಂತ್ರಸ್ತೆ ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವೇಳೆ ಆರೋಪಿಯು ಸೆಷನ್ಸ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆದರೆ, ಜಾಮೀನು ರದ್ದಾಗಿರುವ ವಿಚಾರವನ್ನು ಫಕೀರಪ್ಪ ಹಟ್ಟಿ ಸೆಷನ್ಸ್ ಕೋರ್ಟ್ ಗಮನಕ್ಕೆ ತಂದಿರಲಿಲ್ಲ.
ಜೊತೆಗೆ ವಾಸ್ತವಾಂಶಗಳನ್ನು ಮುಚ್ಚಿಟ್ಟು ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು.
ಈ ವೇಳೆ, ಜಾಮೀನು ರದ್ದಾಗಿರುವ ವಿಚಾರ ಹೈಕೋರ್ಟ್ ಗಮನಕ್ಕೆ ಬರುತ್ತಲೇ ಆರೋಪಿ ಸೆಷನ್ಸ್ ಕೋರ್ಟ್ ಮುಂದೆ ಶರಣಾಗಿ ಜಾಮೀನು ಪಡೆದಿದ್ದರು. ಆರೋಪಿ ಕೋರ್ಟ್ ದಾರಿ ತಪ್ಪಿಸಲು ಯತ್ನಿಸಿದ್ದ ನಡೆಯನ್ನು ಸಂತ್ರಸ್ತೆ ಆಕ್ಷೇಪಿಸಿದ್ದರು.