ಅಫಿಡವಿಟ್ ಮೂಲಕ ಕ್ಷಮೆಯಾಚಿಸಿದ್ದರೂ ಅಸತ್ಯ ಜಾಹೀರಾತು ಮುಂದುವರಿಕೆ: ಪತಂಜಲಿ ವಿರುದ್ಧ ಕಿಡಿ ಕಾರಿದ ಸುಪ್ರೀಂ ಕೋರ್ಟ್
ಅಫಿಡವಿಟ್ ಮೂಲಕ ಕ್ಷಮೆಯಾಚಿಸಿದ್ದರೂ ಅಸತ್ಯ ಜಾಹೀರಾತು ಮುಂದುವರಿಕೆ: ಪತಂಜಲಿ ವಿರುದ್ಧ ಕಿಡಿ ಕಾರಿದ ಸುಪ್ರೀಂ ಕೋರ್ಟ್
ಆಧುನಿಕ ಔಷಧವನ್ನು ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದರೂ. ಆ ಕುರಿತ ಜಾಹೀರಾತನ್ನು ನಿಲ್ಲಿಸಲು ವಿಫಲರಾದ ಬಗ್ಗೆ ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪತಂಜಲಿ ಆಯುರ್ವೇದ ಸಂಸ್ಥೆ ಮತ್ತು ಅದರ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಇಂತಹ ಜಾಹೀರಾತುಗಳ ಪ್ರಸಾರ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂಬ ಪತಂಜಲಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಅಫಿಡವಿಟ್ ಮೂಲಕ ಕ್ಷಮೆಯಾಚಿಸಿದರೂ ಪ್ರಯೋಜನವಿಲ್ಲ. ಇಂದು ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಭರವಸೆಯ ಸಂಪೂರ್ಣ ಉಲ್ಲಂಘನೆ ಎಂದು ಕಿಡಿ ಕಾರಿತು.
ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ, ಪತಂಜಲಿ ಉತ್ಪನ್ನಗಳು ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಗುರಿಯಾಗಿಸಿ ನೀಡಿದ್ದ ಜಾಹೀರಾತಿನ ಬಗ್ಗೆ ಕ್ಷಮೆಯಾಚಿಸಿ ಅಫಿಡವಿಟ್ ಸಲ್ಲಿಸಿದ್ದರು.
ಅಫಿಡವಿಟ್‌ನಲ್ಲಿ ಹೇಳಿರುವ ಹೇಳಿಕೆಗೆ ನೀವು ಬದ್ಧರಾಗಿದ್ದೀರಿ ಎಂಬುದನ್ನು ನ್ಯಾಯಾಲಯಕ್ಕೆ ಖಚಿತಪಡಿಸಬೇಕು. ಈ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪತಂಜಲಿಯ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಅಂದರೆ ಏನರ್ಥ. ಅದೊಂದು ದ್ವೀಪದಂತೆ ಕಾರ್ಯಾಚರಿಸುತ್ತಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಹಾಗಂತ ಹೇಳಿದರೆ ಅದೊಂದು ಕಣ್ಣೊರೆಸುವ ತಂತ್ರವಷ್ಟೇ.. ನೀವು ಗಂಭೀರವಾದ ಮುಚ್ಚಳಿಕೆಯನ್ನು ರಾಜಾರೋಷವಾಗಿ ಲಗಾಮಿಲ್ಲದೆ ಉಲ್ಲಂಘನೆ ಮಾಡಿದ್ದೀರಿ. ಈಗಿನ ಹೇಳಿಕೆ ತೋರಿಕೆಯಾಗಿದ್ದಾಗಿದೆ. ನಿಮ್ಮ ಕ್ಷಮೆಯಾಚನೆಯನ್ನು ಏಕಾದರೂ ಒಪ್ಪಬೇಕು? ಎಂದು ಖಡಕ್ ಆಗಿ ಪ್ರಶ್ನಿಸಿತು.
ನಿಮ್ಮ ಹೇಳಿಕೆ ಮತ್ತು ನಡವಳಿಕೆ ತದ್ವಿರುದ್ಧವಾಗಿದೆ. ಇಂತಹ ಅಸಂಬದ್ಧವನ್ನು ಒಪ್ಪಲು ಸಾಧ್ಯವಿಲ್ಲ. ನಾವು ನಿಮ್ಮ ಹೃದಯವನ್ನು ನೋಡಲಾಗುವುದಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಈ ರೀತಿ ನೋಡಲಾಗದು. ಕೆಲವು ಸಂದರ್ಭಗಳಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೊಂದು ಉದಾರತೆಯನ್ನು ತೋರಲಾಗದು ಎಂದು ನ್ಯಾ. ಅಮಾನುಲ್ಲ ಹೇಳಿದರು.
ನ್ಯಾಯಾಲಯಕ್ಕೆ ಅಬದ್ಧರಾಗಿ ಸುಳ್ಳು ಹೇಳಿಕೆ ನೀಡುವ ವಚನಭ್ರಷ್ಟತೆಯ ವಿಚಾರದಲ್ಲಿ ಪತಂಜಲಿ ತಪ್ಪೆಸಗಿದೆ ಎಂದು ಪೀಠ ಹೇಳಿತು. ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಬಾರದು ಎಂದುಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರವೂ ಪತಂಜಲಿ ಸಂಸ್ಥಾಪಕ ಬಾಬಾ ರಾಮ್‌ದೇವ್ ಪತ್ರಿಕಾಗೋಷ್ಠಿ ನಡೆಸಿದ ರೀತಿಯನ್ನು ನ್ಯಾಯಪೀಠ ಟೀಕಿಸಿತು.
ಪತಂಜಲಿ ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ನ್ಯಾಯಪೀಠ, ಪತಂಜಲಿ ವಿರುದ್ಧ ನ್ಯಾಯಾಂಗ ನಿಂದನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪತಂಜಲಿಗೆ ಬುದ್ಧಿವಾದ ಹೇಳಿತು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು Vs ಭಾರತ ಸರ್ಕಾರ
ಸುಪ್ರೀಂ ಕೋರ್ಟ್