ಪ್ರಧಾನಿ ಮೋದಿ ದ್ವೇಷ ಭಾಷಣ: ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ಪ್ರಧಾನಿ ಮೋದಿ ದ್ವೇಷ ಭಾಷಣ: ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯ ವೇಳೆ ದ್ವೇಷ ಭಾಷಣ ಮಾಢಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಅಥವಾ ಯಾವುದೇ ವಿವರಣೆ ಪಡೆಯದ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಮೋದಿಯವರ ದ್ವೇಷ ಭಾಷಣಗಳ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಲಾಗಿದ್ದರೂ ಭಾರತೀಯ ಚುನಾವಣಾ ಆಯೋಗ ನೇರವಾಗಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಕೇಳುವ ಬದಲು ಬಿಜೆಪಿಗೆ ಕೇವಲ ಒಂದು ಶೋಕಾಸ್ ನೋಟೀಸ್ ನೀಡಿದೆ ಎಂದು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 21ರಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಚುನಾವಣಾ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಿದ್ಧಾರೆ. ಈ ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಖುದ್ದು ಮೋದಿಯೇ ನೇರವಾಗಿ ಅಪರಾಧಿಯಾಗಿದ್ಧಾರೆ. ಅವಹೇಳನಕಾರಿ ಮತ್ತು ವಿಭಜನಕಾರಿ ಭಾಷಣಗಳಿಗೆ ಮೋದಿ ಅವರೇ ಏಕಮಾತ್ರ ಜವಾಬ್ದಾರರು ಎಂದು ಸೆಲ್ವಪೆರುಂತಗೈ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ಧಾರೆ.
ಭಾರತೀಯ ಚುನಾವಣಾ ಆಯೋಗದ ಮೃಧು ಧೋರಣೆಯು ಇಡೀ ದೇಶಕ್ಕೆ ತಪ್ಪು ಸಂದೇಶ ನೀಡಲಿದ್ದು, ದೇಶದ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯ ಮತ್ತು ಸಮಗ್ರತೆಯನ್ನು ಹಾಳು ಮಾಡುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮುಸ್ಲಿಮರನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿದವರು ಎಂದು ಸ್ವತಃ ಪ್ರಧಾನಿಯೇ ಕರೆದಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಇಂತಹ ಹೇಳಿಕೆಗಳನ್ನು ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕಾಂಗ್ರಸ್ ಗೆದ್ದರೆ ಹಿಂದೂಗಳ ಸಂಪತ್ತು ಮುಸ್ಲಿಮರ ಕೈಸೇರುತ್ತದೆ ಎಂಬ ನರೇಂದ್ರ ಮೋದಿಯವರ ಹೇಳಿಕೆಯೂ ಆಕ್ಷೇಪಾರ್ಹವಾದದ್ದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಸಾಂವಿಧಾನಿಕ ಸಂಸ್ಥೆಯಾಗಿ ಅದು ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.