-->
ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ: ಅಪರಾಧಿಗಳಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟರೆ ವೈಯಕ್ತಿಕ ದ್ವೇಷ ಇರಲಿಲ್ಲ!

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ: ಅಪರಾಧಿಗಳಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟರೆ ವೈಯಕ್ತಿಕ ದ್ವೇಷ ಇರಲಿಲ್ಲ!

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ: ಅಪರಾಧಿಗಳಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟರೆ ವೈಯಕ್ತಿಕ ದ್ವೇಷ ಇರಲಿಲ್ಲ!





ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಅವರನ್ನು ಹತ್ಯೆ ಮಾಡಲು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟರೆ ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಹಂತಕರು ತಮ್ಮ ಕೃತ್ಯ ಸಮರ್ಥಿಸಿಕೊಂಡದ್ದು ಖಂಡನೀಯ ಎಂದು ಇಬ್ಬರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದ ಪುಣೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಪುಣೆಯ ಸೆಷನ್ಸ್‌ ನ್ಯಾಯಾಧೀಶರ ಪಿ.ಪಿ. ಜಾಧವ್ ಅವರಿದ್ದ ನ್ಯಾಯಪೀಠ ನೀಡಿದ ತೀರ್ಪಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಹತ್ಯೆಯನ್ನು ಸಮರ್ಥಿಸುವುದು ಪ್ರತಿವಾದದ ವಿಧಾನವಾಗಿತ್ತು ಎಂದು ಹೇಳಿದೆ.


ಈ ಪ್ರಯತ್ನದಲ್ಲಿ ಆರೋಪಿಗಳ ಪರ ವಕೀಲರು ನರೇಂದ್ರ ದಾಬೋಲ್ಕರ್ ಹತ್ಯೆಯಾದ ಐದು ವರ್ಷಗಳ ನಂತರ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ನಂಬಿ ಅವರೊಬ್ಬ ಹಿಂದೂ ವಿರೋಧಿ ಎಂದು ವಾದಿಸಿದ್ದು ಅಲ್ಲದೆ, ದಾಬೋಲ್ಕರ್ ಅವರ ವ್ಯಕ್ತಿತ್ವವನ್ನು ಹಾಳುಗೆಡವಲು ಪ್ರಯತ್ನಿಸಿರುವುದನ್ನು ತೀರ್ಪು ಉಲ್ಲೇಖಿಸಿದೆ.


ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತಿತರ ಹಿಂದೂ ಸಂಘಟನೆಗಳು ದಾಬೋಲ್ಕರ್ ವಿರುದ್ಧ ಕಟುವಾದ ದ್ವೇಷಭಾವ ತಳೆದಿದ್ದವು ಎಂಬುದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ಇದು ಪ್ರಕರಣದಲ್ಲಿ ದಾಖಲಾದ ಪ್ರಮಾಣೀಕೃತ ಹೇಳಿಕೆಗಳು, ಪಾಟೀ ಸವಾಲಿನ ವೇಳೆ ಆರೋಪಿಗಳಿಗೆ ನೀಡಿದ ಸಲಹೆಗಳು ಮತ್ತು ಪ್ರತಿವಾದದ ವಾದಗಳು ಪ್ರತಿಫಲಿಸುತ್ತಿವೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.


ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ನರೇಂದ್ರ ದಾಬೋಲ್ಕರ್ ಅವರನ್ನು 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸನಾತನ ಸಂಘಟನೆಯ ಜೊತೆಗೆ ನಂಟು ಹೊಂದಿದ್ದ ಆರೋಪಿಗಳನ್ನು 2016ರಿಂದ 2019ರ ಅವಧಿಯಲ್ಲಿ ಬಂಧಿಸಲಾಗಿತ್ತು.


ವೀರೇಂದ್ರ ತಾವಡೆ, ಸಂಜೀವ್ ಪುನೋಲ್ಕರ್, ವಿಕ್ರಮ್ ಭಾವೆ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರು ಪ್ರಕರಣದ ಹತ್ಯಾ ಆರೋಪಿಗಳಾಗಿದ್ದಾರೆ. ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ಜೀವಾವಧಿ ಮತ್ತು ಐದು ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.


ಉಳಿದ ಆರೋಪಿಗಳನ್ನು ನಿರಪರಾಧಿಗಳು ಎಂದು ಖುಲಾಸೆಗೊಳಿಸಲಾಗಿದೆ. ಈ ತೀರ್ಪನ್ನು ಸ್ವಾಗತಿಸಿರುವ ದಾಬೋಲ್ಕರ್ ಪುತ್ರ ಡಾ. ಹಮೀದ್, ಮೂವರು ಆರೋಪಿಗಳ ಖುಲಾಸೆ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ಧಾರೆ.


ಎಡಪಂಥೀಯ ಚಿಂತನೆ ಇರುವ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಮಹಾರಾಷ್ಟ್ರ ಮಾತ್ರವಲ್ಲ ಇಡೀ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಇದೇ ಹತ್ಯೆಯ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಗತಿಪರ ಸಾಹಿತಿ ಡಾ. ಎಂ.ಎಂ. ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗಳಿಗೂ ದಾಬೋಲ್ಕರ್ ಹತ್ಯೆಗೂ ನಂಟಿದೆ ಎಂದು ಅನುಮಾನ ವ್ಯಕ್ತವಾಗಿತ್ತು.



Ads on article

Advertise in articles 1

advertising articles 2

Advertise under the article