ಪತಿ ಮೃತಪಟ್ಟರೂ ಕೋರ್ಟ್ ವಿಚಾರಣೆ ಮುಂದುವರಿಕೆ: ಕರ್ನಾಟಕ ಹೈಕೋರ್ಟ್
ಪತಿ ಮೃತಪಟ್ಟರೂ ಕೋರ್ಟ್ ವಿಚಾರಣೆ ಮುಂದುವರಿಕೆ: ಕರ್ನಾಟಕ ಹೈಕೋರ್ಟ್
ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಚೇದನ ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಬಾಕಿ ಇದ್ದಾಗ ಪತಿ ಸಾವನ್ನಪ್ಪಿದರೆ ಅಂತಹ ಸಂದರ್ಭದಲ್ಲಿ ನ್ಯಾಯಿಕ ವಿಚಾರಣಾ ಪ್ರಕ್ರಿಯೆ ರದ್ದಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಅನು ಶಿವರಾಮನ್ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಪ್ರಕರಣವೊಂದರಲ್ಲಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡಿರುವ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನವನ್ನು ರದ್ದುಗೊಳಿಸಿದೆ.
ಪತಿ ನಿಧನರಾಗಿದ್ದರೂ ಪತ್ನಿ ವಿಧವೆಯಾಗುವುದರಿಂದ ಕಾನೂನು ಪ್ರಕಾರ ಅವರಿಗೆ ಸೇರಬೇಕಾದ ಸವಲತ್ತುಗಳು ಸೇರಬೇಕಾಗುತ್ತದೆ. ಪತಿಯ ಆಸ್ತಿಯಲ್ಲಿ ಬರಬೇಕಾದ ಪರಿಹಾರ ಮತ್ತು ಅನುಕಂಪದ ಹುದ್ದೆಗೆ ಪತ್ನಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶ ನೀಡಿದೆ.
ಮೇಲ್ಮನವಿ ಬಾಕಿ ಇದ್ದಾಗ ಪತಿ ನಿಧನರಾದರೂ ಅದರ ಪರಿಣಾಮ ಪ್ರಕರಣದ ಮೇಲಾಗುತ್ತದೆ. ಪತ್ನಿಯ ಸ್ಥಾನಮಾನ, ಅವರ ಹಕ್ಕುಗಳನ್ನು ಆಧರಿಸುತ್ತದೆ. ಹಾಗಾಗಿ, "ಯಲ್ಲವ್ವ ಪ್ರಕರಣ"ದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಕೌಟುಂಬಿಕ ವ್ಯಾಜ್ಯಗಳಲ್ಲಿ ಒಬ್ಬ ವ್ಯಾಜ್ಯಕಾರರು (ಪತ್ನಿ ಯಾ ಪತಿ) ಮೃತಪಟ್ಟರೆ ಪ್ರಕರಣ ರದ್ದಾಗುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ವಿವಾಹ ವಿಚ್ಚೇದನ ಮಂಜೂರು ಮಾಡಲು ಕೌಟುಂಬಿಕ ಕ್ರೌರ್ಯ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅದು ಸಾಬೀತಾಗಿಲ್ಲ. ಆದರೂ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.