ಪರಿಶ್ರಮದಿಂದ ಯಶಸ್ಸು: ಮೀನು ಮಾರುತ್ತಿದ್ದ ಯುವಕ ಈಗ ವಕೀಲ!
ಪರಿಶ್ರಮದಿಂದ ಯಶಸ್ಸು: ಮೀನು ಮಾರುತ್ತಿದ್ದ ಯುವಕ ಈಗ ವಕೀಲ!
ಛಲ ಇದ್ದರೆ ಏನೂ ಮಾಡಬಹುದು ಎಂಬುದನ್ನು ಪುತ್ತೂರಿನ ಈಶ್ವರಮಂಗಲದ ಯುವಕನೊಬ್ಬ ಮಾಡಿತೋರಿಸಿದ್ದಾನೆ. ಕಷ್ಟಪಟ್ಟು ದುಡಿದು ಆದಾಯ ಗಳಿಸಿ ಕಾನೂನು ಶಿಕ್ಷಣ ಪಡೆದ ಈ ಯುವಕ ಈಗ ವಕೀಲರಾಗಿ ವೃತ್ತಿ ಜೀವನಕ್ಕೆ ಅಡಿ ಇರಿಸಿದ್ದಾರೆ.
ಈಶ್ವರ ಮಂಗಲದ ನಿವಾಸಿ ಕೃಷಿಕ ದಾಮೋದರ ಪಾಟಾಳಿ-ಗೀತಾ ದಂಪತಿಯ ಪುತ್ರ ಗೌರೀಶ್ ಚಿಮಿಣಿಗುಡ್ಡೆ ಈ ಸಾಧನೆ ಮಾಡಿದ ಯುವಕ.
ಕೊರೋನಾ ಕಾಲದಲ್ಲಿ ದೇಶವೇ ಅಲ್ಲೋಲ ಕಲ್ಲೋಲವಾಗತ್ತಿದ್ದರೆ ಕಾಲೇಜಿಗೆ ರಜೆ ಘೋಷಿಸಿದ್ದ ಕಾರಣ ಗೌರೀಶ್ ಹಸಿ ಮೀನಿನ ವ್ಯಾಪಾರ ಆರಂಭಿಸಿದ್ದರು. ಒಂದಿಷ್ಟು ಆದಾಯವನ್ನೂ ಗಳಿಸಿಕೊಂಡರು.
ಕೊರೋನಾ ನಿರ್ಬಂಧ ತೆರವಾದ ಬಳಿಕವೂ ಗೌರೀಶ್ ತನ್ನ ಕಾಯಕವನ್ನು ಓದಿನೊಂದಿಗೆ ಮುಂದುವರಿಸಿದರು. ಮುಂಜಾನೆ 3 ಗಂಟೆಗೆ ಎದ್ದು ಮಂಗಳೂರಿನ ದಕ್ಕೆಗೆ ತೆರಳಿ ಮೀನುಗಳನ್ನು ಆಯ್ದು ಖರೀದಿಸಿ ಪುತ್ತೂರಿಗೆ ಮರಳುತ್ತಿದ್ದರು.
ಇರ್ದೆ, ರೆಂಜ, ಸುಳ್ಯಪದವು, ಈಶ್ವರ ಮಂಗಲಗಳಲ್ಲಿ ಇರುವ ಅಂಗಡಿಗಳಿಗೆ ಮೀನುಗಳನ್ನು ಮಾರಾಟ ಮಾಡಿ ಮನೆಗೆ ಮರಳುತ್ತಿದ್ದರು. ಮನೆಯಲ್ಲಿ ಊಟೋಪಚಾರ ಮುಗಿಸಿ ಮತ್ತೆ ಕಾಲೇಜಿಗೆ ತೆರಳುತ್ತಿದ್ದರು.
ಶಿಕ್ಷಣವನ್ನೂ ಅಷ್ಟೇ ನಿಷ್ಠೆಯಿಂದ ಪೂರೈಸಿ ಇದೀಗ ಕಾನೂನು ಪದವಿಯನ್ನು ಮುಗಿಸಿ ಗೌರೀಶ್ ವೃತ್ತಿ ಜೀವನಕ್ಕೆ ಕಾಲಿರಿಸಿದ್ದಾರೆ. ಗೌರೀಶ್ ಅವರ ಹಿರಿಯ ಸಹೋದರ ಚಂದ್ರಹಾಸ್ ಕೂಡ ಪುತ್ತೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ಅತ್ತಿಗೆ ಅಶಿತಾ ಕೂಡ ವಕೀಲೆ. ಇದೀಗ, ಗೌರೀಶ್ ಕೂಡ ವಕೀಲರಾದ ಹಿನ್ನೆಲೆಯಲ್ಲಿ ಹೆತ್ತವರನ್ನು ಹೊರತುಪಡಿಸಿದರೆ ಮನೆ-ಮಂದಿಯೆಲ್ಲ ವಕೀಲರೇ ಆಗಿದ್ದಾರೆ.