ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ: ಜುಲೈ 9ರ ವರೆಗೆ ಅವಕಾಶ ಕಲ್ಪಿಸಿ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ: ಜುಲೈ 9ರ ವರೆಗೆ ಅವಕಾಶ ಕಲ್ಪಿಸಿ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ ಲಭಿಸಿದ್ದು, ಜುಲೈ 9ರ ವರೆಗೆ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಜೂನ್ 25ರಿಂದ ಜುಲೈ 9ರ ವರೆಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.
ಗ್ರೂಪ್ ಎ.ಬಿ, ಸಿ ಮತ್ತು ಡಿ ಸೇರಿದಂತೆ ಎಲ್ಲ ವೃಂದಗಳಿಗೆ ಅನ್ವಯವಾಗುವಂತೆ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ 6ನ್ನು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಯುವ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೆ ನೀಡಲಾಗಿದೆ.
ಅಸ್ತಿತ್ವದಲ್ಲಿ ಇರುವ ನಿಯಮಗಳ ಪ್ರಕಾರ ವರ್ಗಾವಣೆ ಪ್ರಕ್ರಿಯ ಎಪ್ರಿಲ್ ಮೊದಲ ವಾರ ಆರಂಭವಾಗಿ ಮೇ ಅಂತ್ಯದಲ್ಲಿ ಮುಕ್ತಾಯವಾಗಬೇಕು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಾರಣಕ್ಕೆ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ.
ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಸ್ಥಳ ನಿಯುಕ್ತಿಯನ್ನು (ಚಲನ-ವಲನ) ವರ್ಗಾವಣೆ ಎಂದು ಪರಿಗಣಿಸಲಾಗುವುದಿಲ್ಲ. ಸಚಿವಾಲಯದಲ್ಲಿ ಕರ್ತವ್ಯಕ್ಕೆ ಸೇರಿದ ನೌಕರನನ್ನು ಸಚಿವಾಲಯದ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಮಾಡುವ ಸ್ಥಳ ನಿಯುಕ್ತಿಗೂ ಇದು ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೌಕರನ ಮೇಲೆ ಗಂಭೀರ ಆರೋಪಗಳಿದ್ದರೆ, ಅಥವಾ ಇಲಾಖಾ ವಿಚಾರಣೆ, ಕ್ರಿಮಿನಲ್ ನಡಾವಳಿ ಆರಂಭಿಸಿದ್ದರೆ ಅಥವಾ ಬಾಕಿ ಇದ್ದರೆ ಅಂಥವರನ್ನು ಸೂಕ್ಷ್ಮ ಹುದ್ದೆಗೆ ನೇಮಿಸದೆ ತಮ್ಮ ವಿರುದ್ಧ ಬಾಕಿ ಇರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲದ ಕಾರ್ಯಕಾರಿಯೇತರ ಹುದ್ದೆಗೆ ನೇಮಿಸಬೇಕು. ಇಲಾಖಾ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ ಬಾಕಿ ಇರುವ ನೌಕರನನ್ನು ಆತ ಕೋರುವ ಹುದ್ದೆಗೆ ಸ್ಥಳ ನಿಯುಕ್ತಿ ಮಾಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಮಾರ್ಗಸೂಚಿಗಳು:
ನಿವೃತ್ತನಾಗಲು 2 ವರ್ಷಕ್ಕಿಂತ ಕಡಿಮೆ ಸೇವಾವಧಿ ಇದ್ದಲ್ಲಿ, ಒಂದು ಹುದ್ದೆಯಲ್ಲಿ ಕನಿಷ್ಟ 2 ವರ್ಷ ಪೂರೈಸಬೇಕು ಎಂಬ ನಿಯಮದಿಂದ ವಿವಾಯಿತಿ ಇದ್ದು, ವರ್ಗಾವಣೆ ಮಾಡಬಹುದು.
ವಿಶೇಷ ತಾಂತ್ರಿಕ ಅರ್ಹತೆ, ಅನುಭವ ಹೊಂದಿದ್ದು, ನಿರ್ದಿಷ್ಟ ಹುದ್ದೆಗೆ ತಕ್ಷಣ ನೇಮಿಸಲು ನೌಕರ ಲಭ್ಯ ಇಲ್ಲದಿದ್ದರೂ ವರ್ಗಾವಣೆಗೆ ಅವಕಾಶ ಇದೆ.
ಯಾವುದಾದರೂ ಯೋಜನೆ ಪೂರ್ಣವಾಗದೇ ಇದ್ದರೆ, ಆ ಯೋಜನೆಯಲ್ಲಿ ಕೆಲಸ ಮಾಡುವವರ ವರ್ಗಾವಣೆಗೆ ಅವಕಾಶ ಇಲ್ಲ.
ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಒಬ್ಬರು ವರ್ಗಾವಣೆಗೊಂಡು ಇನ್ನೊಬ್ಬರು ಕನಿಷ್ಟ ಸೇವಾವಧಿ ಪೂರೈಸದಿದ್ದರೂ ವರ್ಗಾವಣೆ ಮಾಡಬಹುದು.
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದರೆ ಪದಾಧಿಕಾರದ ಅವಧಿ ಮುಗಿಯುವವರೆಗೆ ವರ್ಗಾವಣೆ ಮಾಡಬಾರದು.
ನೌಕರ, ಆತನ ಪತ್ನಿ ಅಥವಾ ಮಕ್ಕಳು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದರೆ ಚಿಕಿತ್ಸಾ ಸೌಲಭ್ಯ ವಿರುವ ಕಡೆಗೆ ವರ್ಗಾವಣೆ ಮಾಡಬಹುದು.