ಅಮಾಯಕರ ವಿರುದ್ಧ ದ್ವೇಷ ಸಾಧನೆ: ಸುಳ್ಳು ಕೇಸ್ ಹಾಕಿದ ಪೊಲೀಸರ ವಿರುದ್ಧ ಕ್ರಮ- ನಾಲ್ವರು ಅಧಿಕಾರಿಗಳು ಸಸ್ಪೆಂಡ್
ಅಮಾಯಕರ ವಿರುದ್ಧ ದ್ವೇಷ ಸಾಧನೆ: ಸುಳ್ಳು ಕೇಸ್ ಹಾಕಿದ ಪೊಲೀಸರ ವಿರುದ್ಧ ಕ್ರಮ- ನಾಲ್ವರು ಅಧಿಕಾರಿಗಳು ಸಸ್ಪೆಂಡ್
ಗಾಂಜಾ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಮಾದಕ ವಸ್ತು ಮಾರಾಟ ಆರೋಪದಡಿ ಅಮಾಯಕರ ವಿರುದ್ಧ ಕೇಸು ಹಾಕಿದ್ದ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ನಾಲ್ವರು ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ಗುಗ್ರಿ, ಎಎಸ್‌ಐ ಎಸ್.ಕೆ. ರಾಜು, ಕಾನ್ಸ್‌ಟೆಬಲ್‌ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅವರನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಕಳೆದ ಆಗಸ್ಟ್ 9ರಂದು ಕದಿರೇನಹಳ್ಳಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಬನಶಂಕರಿ ಪೊಲೀಸರು ವಶಕ್ಕೆ ಪಡೆದಿದದರು. ಆರೋಪಿತರ ದ್ವಿಚಕ್ರ ವಾಹನದಲ್ಲಿ ಇದ್ದ ಸುಮಾರು 400 ಗ್ರಾಂ ತೂಕದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆರೋಪಿತರ ಬಂಧನದಿಂದ ಕಂಗಾಲಾದ ಕುಟುಂಬ ಸದಸ್ಯರು ಬೆಂಗಳೂರು ನಗರ ಪೊಲೀಸ್ ಅಯುಕ್ತರಿಗೆ ದೂರು ಸಲ್ಲಿಸಿದ್ದರು. ತಮ್ಮವರು ನಿರಪರಾಧಿಗಳಾಗಿದ್ದು, ಪೊಲೀಸ್ ಬಾತ್ಮೀದಾರ ರಾಜನ್ ಎಂಬಾತನ ಕುಮ್ಮಕ್ಕಿನಿಂದ ಆರೋಪಿಗಳ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.
ಈ ದೂರನ್ನು ಪರಿಗಣಿಸಿದ ಬೆಂಗಳೂರು ಪೊಲೀಸ್ ಆಯುಕ್ತರು, ಬಾತ್ಮೀದಾರ ರಾಜನ್ ಅವರ ತನಿಖೆಗೆ ಸೂಚಿಸಿದ್ದರು. ತನಿಖೆ ವೇಳೆ, ಪೊಲೀಸ್ ಬಾತ್ಮೀದಾರ ರಾಜನ್ ಸುಳ್ಳು ಮಾಹಿತಿ ನೀಡಿದ್ದು ಬಯಲಾಗಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು ಕರ್ತವ್ಯ ಲೋಪ ಎಸಗಿರುವುದು ಗೊತ್ತಾದ ಬೆನ್ನಲ್ಲೇ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.