![ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ: ವಕೀಲರ ವಿರುದ್ಧ ಬಲವಂತದ ಕ್ರಮ ಬೇಡ- ಹೈಕೋರ್ಟ್ ಸೂಚನೆ ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ: ವಕೀಲರ ವಿರುದ್ಧ ಬಲವಂತದ ಕ್ರಮ ಬೇಡ- ಹೈಕೋರ್ಟ್ ಸೂಚನೆ](https://blogger.googleusercontent.com/img/b/R29vZ2xl/AVvXsEg-8iJXzsj2gk_S9GbcKMsIClvB1oHDyGc9J2RI_49iFJBZi7xATO3_UAj2k5zFbTaVAL9aGN5c4jbGLnvnT0fHz4by87xm6odkNJ5DLQc7Ejd1vKLb_x6EU4Xn2W4lWFpH22UaEmY93PfmI-jxJuB2oQ4XvKsLxix4CPpx02M4Ykq2BekBJdBwT2w5FLxJ/w640-h430/Law%20Legal%20Court%20(2).jpg)
ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ: ವಕೀಲರ ವಿರುದ್ಧ ಬಲವಂತದ ಕ್ರಮ ಬೇಡ- ಹೈಕೋರ್ಟ್ ಸೂಚನೆ
ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ: ವಕೀಲರ ವಿರುದ್ಧ ಬಲವಂತದ ಕ್ರಮ ಬೇಡ- ಹೈಕೋರ್ಟ್ ಸೂಚನೆ
ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರ ವಿರುದ್ಧ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ದೂರು ನೀಡಿದ ಹಿನ್ನೆಲೆಯಲ್ಲಿ ಹಾಸನದ ವಕೀಲರಾದ ದೇವರಾಜೇಗೌಡ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯಾವುದೇ ಅನುಮತಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿ ವಕೀಲರಾದ ದೇವರಾಜೇಗೌಡ ಅವರು ತಮ್ಮನ್ನು ನಿಂದಿಸಿದ್ದಾರೆ ಮತ್ತು ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 353 ಅಡಿ ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ ಅಥವಾ ಬಲಪ್ರಯೋಗದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಪೊಲೀಸರು ದಾಖಲಿಸಿರುವ ಪ್ರಥಮ ವರ್ತಮಾನ ವರದಿ(FIR)ನ್ನು ರದ್ದುಪಡಿಸಬೇಕು ಎಂದು ಕೋರಿ ವಕೀಲರಾದ ದೇವರಾಜೇಗೌಡ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿವರ
ವಕೀಲ ದೇವರಾಜೇಗೌಡ ಅವರು 2024ರ ಮಾರ್ಚ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹಾಸನ ಜಿಲ್ಲಾಧಿಕಾರಿಯವರ ವಿರುದ್ಧ ಆರೋಪ ಮಾಡಿದ್ದರು. ಚನ್ನರಾಯಪಟ್ಟಣದ ಆದ್ಯಾಸ್ ಬಾರ್ ಆಂಡ್ ರೆಸ್ಟೋರೆಂಟ್ ಕಾನೂನುಬಾಹಿರವಾಗಿ ನಡೆಯುತ್ತಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದು, ಸದ್ರಿ ಬಾರ್ ವಿರುದ್ಧ ಕ್ರಮ ಜರುಗಿಸುವಂತೆ ಕೋರಿಕೊಂಡಿದ್ದರು ಎಂದು ವಕೀಲರು ಆರೋಪ ಮಾಡಿದ್ದರು.
ಅಬಕಾರಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರೂ ಆರೋಪಕ್ಕೆ ಸಂಬಂಧಿಸಿದ ಕಡತಗಳನ್ನು ಉಳಿಸಿಕೊಂಡು ಹಾಸನ ಜಿಲ್ಲಾಧಿಕಾರಿಯವರು ಅಕ್ರಮಕ್ಕೆ ಸಾಥ್ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಸುದ್ದಿಗೋಷ್ಠಿ ನಂತರ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಹಾಸನ ನಗರ ಪೊಲೀಸರಿಗೆ ವಕೀಲರ ವಿರುದ್ಧ ಲಿಖಿತ ದೂರು ನೀಡಿದ್ದರು. ಬಳಿಕ ವಕೀಲರ ವಿರುದ್ಧ FIR ದಾಖಲಿಸಲಾಗಿತ್ತು.