ಕೋರ್ಟ್ ಕಲಾಪದ ವೇಳೆ ಅನಪೇಕ್ಷಿತ ಹೇಳಿಕೆ: ಹಿರಿಯ ವಕೀಲರ ಸಮ್ಮುಖದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ
ಕೋರ್ಟ್ ಕಲಾಪದ ವೇಳೆ ಅನಪೇಕ್ಷಿತ ಹೇಳಿಕೆ: ಹಿರಿಯ ವಕೀಲರ ಸಮ್ಮುಖದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ವಿಷಾದ
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ನ್ಯಾಯಮೂರ್ತಿಗಳಾಗಿದ್ದಾರೆ. ಅವರ ಎರಡು ವೀಡಿಯೋ ಅವರನ್ನು ರಾತ್ರಿ ಬೆಳಗಾಗುವುದರೊಳಗೆ ಕುಖ್ಯಾತಿಗೊಳಿಸಿದೆ.
ಬೆಂಗಳೂರಿನ ಗೋರಿಪಾಳ್ಯದಲ್ಲಿ ಇರುವ ಪ್ರದೇಶ "ಪಾಕಿಸ್ತಾನ" ಎಂಬ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಕಮೆಂಟ್ ಅವರಿಗೆ ಸಂಕಷ್ಟ ತಂದಿದೆ. ಈ ವೀಡಿಯೋ ವೈರಲ್ ಆಗಿದ್ದು, ದೇಶಾದ್ಯಂತ ಸುದ್ದಿಗೆ ಗ್ರಾಸವೊದಗಿಸಿತ್ತು.
ಆಗಸ್ಟ್ 28ರಂದು ಕಲಾಪದಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ವೀಡಿಯೋದಲ್ಲಿ ನ್ಯಾಯಮೂರ್ತಿಗಳು ಆಡಿದ್ದಾರೆ ಎನ್ನಲಾದ ಮಾತುಗಳಿಗೆ ಸಂಬಂಧಿಸಿದಂತೆ ಸ್ವತಃ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ಘಟನೆಯ ಗಂಭೀರತೆಗೆ ಕನ್ನಡಿ ಹಿಡಿದಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿ ಕೇಳಿದೆ.
ಈ ವಿಚಾರದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನೂ ನ್ಯಾಯಪೀಠ ಬಯಸಿದೆ.
ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನೀಡಿದ ಕೆಲ ಹೇಳಿಕೆಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ನೆರವನ್ನು ಕೇಳಿಕೊಳ್ಳುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನ ಪಡೆದು ಎರಡು ವಾರದಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಬಹುದು ಮತ್ತು ಇಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಎರಡು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಒಂದು ವೀಡಿಯೋ ಬೆಂಗಳೂರಿನ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶವನ್ನು 'ಪಾಕಿಸ್ತಾನ' ಎಂದು ಕರೆದಿದ್ದರು.
ಬೆಂಗಳೂರಿನ ಮೈಸೂರು ರಸ್ತೆಯ ಮೇಲ್‌ಸೇತುವೆಗೆ ಹೋಗಿ ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೋ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಳ್ಳಲಾಗುತ್ತದೆ. ಮೈಸೂರು ರಸ್ತೆಯ ಮೇಲ್‌ಸೇತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ. ಇದು ವಾಸ್ತವ... ಎಂಥಹುದೇ ಕಟ್ಟುನಿಟ್ಟಿನ ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ಹಿಡಿದುಬಿಡಲಿ.. ನೋಡುತ್ತೇನೆ ಎಂದಿದ್ದರು.
ಇನ್ನೊಂದು ವೀಡಿಯೋದಲ್ಲಿ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ವಕೀಲರೊಬ್ಬರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು. ಅವರ ಕುರಿತಾಗಿ ಅವರನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು.
ನಿಮ್ಮ ಅರ್ಜಿದಾರರು ತೆರಿಗೆ ಪಾವತಿದಾರರೇ..? ಎಂದು ನ್ಯಾಯಮೂರ್ತಿ ಶ್ರೀಶಾನಂದ ಕೇಳಿದ ಪ್ರಶ್ನೆಗೆ ಉತ್ತರ ಹೇಳಲು ಪ್ರತಿವಾದಿ ವಕೀಲರು ರೆಡಿಯಾದರು. ಆಗ ಮಹಿಳಾ ವಕೀಲರೊಬ್ಬರು, ಹೌದು ಅವರು ತೆರಿಗೆ ಪಾವತಿದಾರರು ಎಂದು ಉತ್ತರಿಸಿದರು. ಆಗ ಕೂಡಲೇ ಆ ಮಾತಿಗೆ ತಡೆಯೊಡ್ಡುವ ಮಾತನಾಡಿದ ನ್ಯಾಯಮೂರ್ತಿಗಳು, ತಾಳಮ್ಮಾ, ನಿನಗೆ ಅವರದ್ದೆಲ್ಲಾ ಪೂರ್ತಿ ಗೊತ್ತಿದೆ. ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳ್ತೀರಿ.. ಅವರು ಯಾವ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂಬುದನ್ನೂ ಹೇಳಿ ಬಿಡುತ್ತೀರಿ.. ಎಂದು ಹೇಳಿದ್ದರು.
ಈ ಎರಡು ಘಟನೆಗಳು ಕೋರ್ಟ್ ಕಲಾಪದ ವೇಳೆ ನಡೆದಿತ್ತು. ಈ ಘಟನೆಯ ವೀಡಿಯೋ ವೈರಲ್ ಆಗುತ್ತಲೇ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ, ಗೌರವಾನ್ವಿತ ನ್ಯಾಯಮೂರ್ತಿ ವಿ. ಶ್ರೀಶಾನಂದ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಯಾರನ್ನೂ ವೈಯಕ್ತಿಕವಾಗಿ ನೋಯಿಸುವ ಉದ್ದೇಶ ನಾನು ಹೊಂದಿಲ್ಲ. ಅದೇ ರೀತಿ ಯಾವುದೇ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ ಎಂದು ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕಲಾಪದ ವೇಳೆ ಓಪನ್ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳು ಪತ್ರವನ್ನು ಓದಿದರು. "ನಾನು ವ್ಯಕ್ತಪಡಿಸಿರುವ ಅಭಿಪ್ರಾಯವು ಯಾವುದೇ ವ್ಯಕ್ತಿ ಯಾ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ನನ್ನ ಹೇಳಿಕೆಯಿಂದ ಯಾವುದೇ ವ್ಯಕ್ತಿಗೆ ಅಥವಾ ಸಮಾಜಕ್ಕೆ ನೋವುಂಟಾಗಿದ್ದರೆ ಅಂತರಾಳದಿಂದ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಎಂ. ಅರುಣ್ ಶ್ಯಾಮ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರ ಸಮ್ಮುಖದಲ್ಲಿ ಅವರು ಈ ಹೇಳಿಕೆಯನ್ನು ಓದಿದ್ದಾರೆ.