ಕರಾವಳಿಗೆ ಬೇಕು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ: ಪ್ರಬಲ ಬೇಡಿಕೆ ಮಂಡಿಸಲು ಮಂಗಳೂರು ವಕೀಲರ ನಿರ್ಧಾರ
ಕರಾವಳಿಗೆ ಬೇಕು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ: ಪ್ರಬಲ ಬೇಡಿಕೆ ಮಂಡಿಸಲು ಮಂಗಳೂರು ವಕೀಲರ ನಿರ್ಧಾರ
ಕರಾವಳಿ ಕರ್ನಾಟಕ ಭಾಗದ ಜನರಿಗೆ ಕರ್ನಾಟಕ ಹೈಕೋರ್ಟ್ ಎಂಬುದು ದೂರದ ಬೆಟ್ಟದಂತಾಗಿದೆ. ಬಹುತೇಕ ಮಂದಿ ಬೆಂಗಳೂರಿಗೆ ಹೇಗೆ ಹೋಗುವುದು ಎಂಬ ಕಾರಣಕ್ಕೆ ನ್ಯಾಯದಿಂದ ವಂಚಿತರಾಗಿದ್ದಾರೆ.
ಅವರ ಬಹುದಿನಗಳ ನಿರೀಕ್ಷೆ ಈಗ ಗರಿಬಿಚ್ಚಿಕೊಂಡಿದೆ. ಉಡುಪಿ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಬೇಡಿಕೆ ಸಲ್ಲಿಸಿದ್ದು, 10 ಎಕರೆ ಜಮೀನಿನಲ್ಲಿ ಸುಸಜ್ಜಿತ ಹೈಕೋರ್ಟ್ ಕಟ್ಟಡ ಸಂಕೀರ್ಣ ನಿರ್ಮಿಸಬಹುದು ಎಂಬ ಪ್ರಬಲ ಬೇಡಿಕೆ ಸಲ್ಲಿಸಿದ್ದಾರೆ.
ಈ ಮಧ್ಯೆ, ಮಂಗಳೂರು ವಕೀಲರೂ ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಮತ್ತು ಹಕ್ಕೊತ್ತಾಯ ಮಂಡಿಸಲು ಹಿರಿಯ ವಕೀಲರ ಸಮಿತಿಯನ್ನು ರಚಿಸಲಾಗಿದೆ.
ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ಸಮಿತಿಯನ್ನು ರಚಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ನೇತೃತ್ವದ ಭರವಸೆ ನೀಡಿದ್ದಾರೆ.
ಹಿರಿಯ ವಕೀಲರ ಮಾರ್ಗದರ್ಶನ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟವನ್ನು ತೀವ್ರಗೊಳಿಸಲು ಮಂಗಳೂರು ವಕೀಲರು ಚರ್ಚೆ ನಡೆಸಿದ್ದಾರೆ.
ಜಿಲ್ಲೆಯ ವಿವಿಧ ವಕೀಲರ ಸಂಘಗಳ ಬೆಂಬಲ
ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಮತ್ತು ಹಕ್ಕೊತ್ತಾಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಕೀಲರ ಸಂಘಗಳೂ ಕೈಜೋಡಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಮೂಲಭೂತ ಸೌಕರ್ಯ ಇರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಐದು ಜಿಲ್ಲೆಗಳ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಮಂಗಳೂರು ನಗರದ ಜೈಲು ತೆರವಾಗಲಿದೆ. ಕಾರಾಗೃಹ ನಗರದ ಹೊರವಲಯಕ್ಕೆ ಸ್ಥಳಾಂತರವಾಗಲಿದೆ. ಆಗ ಜೈಲಿನ ಪ್ರದೇಶ ತೆರವಾಗಲಿದ್ದು, ಸುಮಾರು ಐದರಿಂದ ಆರು ಎಕರೆ ಸ್ಥಳ ಲಭಿಸಲಿದೆ. ಈ ಸ್ಥಳ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅಭಿಪ್ರಾಯಪಟ್ಟರು.
ಅಲ್ಲದೆ ಮಂಗಳೂರು ನಗರ ಹೈಕೋರ್ಟ್ ಪೀಠ ಸ್ಥಾಪಿಸಲು ಸೂಕ್ತ ಪ್ರದೇಶವಾಗಿದ್ದು, ಮಂಗಳೂರು ನಗರಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೌಲಭ್ಯ, ರಸ್ತೆ ಸಾರಿಗೆ ಸೌಲಭ್ಯ ಅಲ್ಲದೆ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರವಾಗಿದೆ ಹಾಗೂ ಹೆಚ್ಚಿನ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ವಕೀಲರು ವಿವರಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷರಾದ ತೋನ್ಸೆ ನಾರಾಯಣ ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದು ಬೆಂಬಲವನ್ನು ವ್ಯಕ್ತಪಡಿಸಿದರು.
ಬಂಟ್ವಾಳ ವಕೀಲರ ಸಂಘ, ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಮತ್ತು ಸುಳ್ಯ ತಾಲೂಕು ವಕೀಲರ ಸಂಘದ ಪ್ರತಿನಿಧಿಗಳೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.