Sale Certificate | ಮಾರಾಟ ಪ್ರಮಾಣ ಪತ್ರ ಕಡ್ಡಾಯ ನೋಂದಣಿಯ ದಾಖಲೆ ಅಲ್ಲ: ಕರ್ನಾಟಕ ಹೈಕೋರ್ಟ್
Sale Certificate | ಮಾರಾಟ ಪ್ರಮಾಣ ಪತ್ರ ಕಡ್ಡಾಯ ನೋಂದಣಿಯ ದಾಖಲೆ ಅಲ್ಲ: ಕರ್ನಾಟಕ ಹೈಕೋರ್ಟ್
ಬಹಿರಂಗ ಹರಾಜಿನಲ್ಲಿ ಖರೀದಿಸಿದ ಆಸ್ತಿಗೆ ನೀಡುವ ಮಾರಾಟ ಪ್ರಮಾಣಪತ್ರ ಮಾರಾಟ ಪ್ರಮಾಣಪತ್ರ (ಸೇಲ್ ಸರ್ಟಿಫಿಕೇಟ್ ) ವನ್ನು ನೋಂದಣಿ ಕಚೇರಿಯ ಪುಸ್ತಕ ಸಂಖ್ಯೆ 1ರಲ್ಲಿ ದಾಖಲಿಸುವುದನ್ನು ಹೊರತುಪಡಿಸಿ ಕಡ್ಡಾಯವಾಗಿ ನೋಂದಾಯಿಸಬೇಕೆಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೈಸೂರು ವಿಜಯನಗರದ ನಿವಾಸಿ ಜಯರಾಮ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಗೌರವಾನ್ವಿತ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಬಹಿರಂಗ ಹರಾಜಿನಲ್ಲಿ ಖರೀದಿಸಿದ ಆಸ್ತಿಯ ಮಾರಾಟ ಪ್ರಕ್ರಿಯೆ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಅರ್ಥವಲ್ಲ. ಇಂತಹ ಆಸ್ತಿಯ ಮಾಲಕತ್ವ ವರ್ಗಾವಣೆಗೆ ಯಾವುದೇ ತೊಡಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಅರ್ಜಿದಾರ ಜಯರಾಮ್ ಎಂಬವರು 02.06.2017ರಂದು ಕರ್ನಾಟಕ ಬ್ಯಾಂಕ್‌ನಿಂದ ಹರಾಜಿಗಿಟ್ಟ ಸ್ಥಿರಾಸ್ತಿಯನ್ನು ಬಹಿರಂಗ ಹರಾಜಿನಲ್ಲಿ ಖರೀದಿಸಿದ್ದರು. ಆ ಬಳಕ 2020ರ ನವೆಂಬರ್‌ನಲ್ಲಿ ಅವರು ಸೇಲ್ ಸರ್ಟಿಫಿಕೇಟ್‌ನ್ನು ನೋಂದಣಿ ಮಾಡಲು ಮೈಸೂರು ಉತ್ತರ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಸೇಲ್ ಸರ್ಟಿಫಿಕೇಟ್‌ನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿಯವರು ನಿರಾಕರಿಸಿದರು.
ಅವರು ಕೊಟ್ಟ ಹಿಂಬರಹ ಹೀಗಿತ್ತು;
"ರವರಿಗೆ, ಕೆ.ಎಸ್. ಜಯರಾಮ ಬಿನ್ ಸಿದ್ದೇಗೌಡ, #1585, 2ನೇ ಹಂತ, 5ನೇ ಮೇನ್, ವಿಜಯನಗರ, ಮೈಸೂರು - 570 017.
: ಹಿಂಬರಹ :
ವಿಷಯ: "ದಸ್ತಾವೇಜು ಹಾಜರಾತಿಯ ಕಾಲ ವಿಳಂಬದ ಬಗೆಗೆ"
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಾವುಗಳು ಮೈಸೂರು ಉತ್ತರ ಉಪನೋಂದಣಿ ಕಛೇರಿಗೆ ಹಾಜರುಪಡಿಸಿರುವ SALE CERTIFICATE ದಸ್ತಾವೇಜನ್ನು ದಿನಾಂಕ : 02.06.2017ರಂದು ಬರೆದುಕೊಟ್ಟಿದ್ದು ನೋಂದಣಿ ಕಾಯ್ದೆ 1908ರ ಕಲಂ 23ರಂತೆ 4 ತಿಂಗಳುಗಳನ್ನು ಮೀರಿರುವುದರಿಂದ ಹಾಗೂ ಕಲಂ 24 ರಂತೆ ಅಧಿಕವಾಗಿ 4 ತಿಂಗಳುಗಳು ಮೀರಿರುವುದರಿಂದ ದಸ್ತಾವೇಜನ್ನು ನೋಂದಣಿಯಿಂದ ನಿರಾಕರಿಸಲಾಗಿದೆ."
ಈ ಹಿಂಬರಹದಿಂದ ಬಾಧಿತರಾದ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು. ಸೇಲ್ ಸರ್ಟಿಫಿಕೇಟ್‌ನ್ನು ನೋಂದಣಿ ಮಾಡಲು ಎದುರುದಾರರಿಗೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಪೀಠವನ್ನು ಮನವಿ ಮಾಡಿದ್ದರು.
ನೋಂದಣಿ ಕಾಯ್ದೆ 1908ರ ಕಲಂ 17 ಉಪ ಕಲಂ 2 (xii) ರ ಪ್ರಕಾರ ಕೆಲವೊಂದು ದಾಖಲೆಗಳನ್ನು ನೋಂದಣಿ ಮಾಡಬೇಕಾದ ದಾಖಲೆಗಳಿಂದ ಹೊರಗಿಡಲಾಗಿದೆ. ಅದರಲ್ಲಿ ಸಿವಿಲ್ ಅಥವಾ ಕಂದಾಯ ಅಧಿಕಾರಿಗಳಿಗೆ ಸಾರ್ವಜನಿಕ ಹರಾಜಿನಲ್ಲಿ ಮಾರಾಟವಾದ ಸ್ಥಿರಾಸ್ತಿಯ ಮಾರಾಟ ಪ್ರಮಾಣಪತ್ರವೂ ಒಳಗೊಂಡಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸೇಲ್ ಸರ್ಟಿಫಿಕೇಟ್‌ನ್ನು ಖರೀದಿದಾರರು ವೈಯಕ್ತಿಕವಾಗಿ ನೋಂದಣಿ ಕಚೇರಿಗೆ ಭೇಟಿ ನೀಡಿ ಸೆಕ್ಷನ್ 89(4) ಪ್ರಕಾರ ನೋಂದಣಿ ಕಚೇರಿಯ ಪುಸ್ತಕ-1ರಲ್ಲಿ ನೋಂದಾಯಿಸಬೇಕೆಂದಿಲ್ಲ. ಕಂದಾಯ ಅಧಿಕಾರಿಯು ನೋಂದಣಿ ಕಚೇರಿಗೆ ಸೇಲ್ ಸರ್ಟಿಫಿಕೇಟ್‌ನ ಪ್ರತಿಯನ್ನು ರವಾನಿಸುವ ಮೂಲಕ ನೋಂದಣಿ ಕಚೇರಿಯ ಪುಸ್ತಕ-1ರಲ್ಲಿ ನೋಂದಣಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಕಂದಾಯ ಅಧಿಕಾರಿಯು ಮಾರಾಟ ಪ್ರಮಾಣಪತ್ರದ ಪ್ರತಿಯನ್ನು ನೋಂದಣಿ ಕಚೇರಿಗೆ ಕಳುಹಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, ಮತ್ತೊಂದು ಪ್ರತಿಯನ್ನು ಕಳುಹಿಸುವಂತೆ ಕಂದಾಯ ಅಧಿಕಾರಿಗೆ ನಿರ್ದೇಶನ ನೀಡಿದೆ. ಈ ಪ್ರತಿಯನ್ನು ಆದೇಶ ದೊರೆತ ಎರಡು ತಿಂಗಳೊಳಗೆ ನೋಂದಣಿ ಕಚೇರಿಯ ಪುಸ್ತಕ-1ರಲ್ಲಿ ನಮೂದು ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.
ಪ್ರಕರಣ: ಕೆ.ಎಸ್. ಜಯರಾಮ್ Vs ಉಪ ನೋಂದಣಾಧಿಕಾರಿ, ಮೈಸೂರು ಉತ್ತರ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 4327/2021 Dated 26-11-2021
Registration Act: Auction Sale Certificate is not compulsorily registrable document except the entry in the Book-1. Transfer of title is not vitiated by non registration of the Certificate, held Justice Krishna S Dixit, Karnataka High Court.