ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ, ಅಂತಹ ಹೇಳಿಕೆ ದೇಶದ ಸಮಗ್ರತೆಗೆ ಅಪಾಯಕಾರಿ: ಸುಪ್ರೀಂ ಕೋರ್ಟ್
ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ, ಅಂತಹ ಹೇಳಿಕೆ ದೇಶದ ಸಮಗ್ರತೆಗೆ ಅಪಾಯಕಾರಿ: ಸುಪ್ರೀಂ ಕೋರ್ಟ್
ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ. ಅಂತಹ ಹೇಳಿಕೆ ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರೋಧಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ವಿಭಾಗೀಯ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಆಕ್ಷೇಪಾರ್ಹ ಹೇಳಿಕೆಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ವಿಭಾಗೀಯ ನ್ಯಾಯಪೀಠ ತೀವ್ರ ಆಕ್ಷೇಪ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿತು. ವೈಯಕ್ತಿಕ ಪೂರ್ವಗ್ರಹಗಳು ತಮ್ಮ ಕರ್ತವ್ಯದಲ್ಲಿ ಪ್ರತಿಫಲಿಸದಂತೆ ವಕೀಲರು ಮತ್ತು ನ್ಯಾಯಮೂರ್ತಿಗಳು ಎಚ್ಚರ ವಹಿಸಬೇಕು ಎಂದು ನ್ಯಾಯಪೀಠ ಬುದ್ದಿಮಾತು ಹೇಳಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.
ಸ್ತ್ರೀ ದ್ವೇಷ ಹರಡುವ ಮತ್ತು ನಿರ್ದಿಷ್ಟ ಲಿಂಗ ಅಥವಾ ಸಮುದಾಯಗಳ ಕುರಿತು ಪೂರ್ವಗ್ರಹ ಪೀಡಿತ ಹೇಳಿಕೆಗಳನ್ನು ನೀಡಬಾರದು ಎಂದು ನ್ಯಾಯಪೀಠ ತಾಕೀತು ಮಾಡಿತು. ನ್ಯಾಯಮೂರ್ತಿ ಶ್ರೀಶಾನಂದ ಅವರು ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಇದು ಸಾಮಾಜಿಕ ಮಾಧ್ಯಮಗಳ ಯುಗ. ಈ ಕಾಲಘಟ್ಟದಲ್ಲಿ ನ್ಯಾಯಾಧೀಶರು ಯಾವುದೇ ಅಭಿಪ್ರಾಯ ಅಥವಾ ಹೇಳಿಕೆಯು ವ್ಯಾಪಕ ಪರಿಣಾಮ ಬೀರುತ್ತದೆ. ನಕಾರಾತ್ಮಕ ಪ್ರಚಾರವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು. ತಮ್ಮ ಮನೋಧರ್ಮ ಅರಿತು ಅವರು ಕಾರ್ಯನಿರ್ವಹಿಸಬೇಕು. ಇದರಿಂದ ಅವರು ನಿಷ್ಪಕ್ಷಪಾತವಾಗಿ ನ್ಯಾಯ ನೀಡಬಹುದು ಎಂದು ನ್ಯಾಯಪೀಠ ತಿಳಿ ಹೇಳಿತು.
ಕೋರ್ಟ್ ಕಲಾಪವು ಭೌತಿಕ ಎಲ್ಲೆ ಮೀರಿದ ಪ್ರೇಕ್ಷಕರನ್ನು ತಲುಪುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು, ನ್ಯಾಯಾಧೀಶರು ಮತ್ತು ವಕೀಲರು ತಿಳಿದಿರಬೇಕು. ತಮ್ಮ ಅವಲೋಕನ ಮತ್ತು ಅಭಿಪ್ರಾಯದಿಂದ ಸಮಾಜದ ಮೇಲೆ ಬೀರುವ ವ್ಯಾಪಕ ಪ್ರಭಾವದ ಬಗ್ಗೆ ಎಲ್ಲರೂ ಅರಿತು ಕಾರ್ಯನಿರ್ವಹಿಸಬೇಕು ಎಂದು ನ್ಯಾಯಪೀಠ ಬುದ್ದಿವಾದ ಹೇಳಿತು.