ಸಾಹಿತಿ ಮುಖಕ್ಕೆ ಮಸಿ: ದುರ್ನಡತೆ ತೋರಿದ ವಕೀಲರ ಸನದು ಅಮಾನತು, ಮೂರು ತಿಂಗಳು ವಕೀಲಿಕೆಗೆ ನಿರ್ಬಂಧ
ಸಾಹಿತಿ ಮುಖಕ್ಕೆ ಮಸಿ: ದುರ್ನಡತೆ ತೋರಿದ ವಕೀಲರ ಸನದು ಅಮಾನತು, ಮೂರು ತಿಂಗಳು ವಕೀಲಿಕೆಗೆ ನಿರ್ಬಂಧ
ವಿವಾದಾತ್ಮಕ ಸಾಹಿತಿ ಕೆ. ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ದುರ್ನಡತೆ ತೋರಿದ ವಕೀಲರ ಸನದು ಅಮಾನತು ಮಾಡಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿ, ಆರೋಪಿ ವಕೀಲರನ್ನು ಮೂರು ತಿಂಗಳು ವಕೀಲಿಕೆ ನಡೆಸಲು ನಿರ್ಬಂಧ ಹೇರಿದೆ.
ನ್ಯಾಯಾಲಯದ ಆವರಣದಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿಯಲಾಗಿತ್ತು. ವಕೀಲರಾದ ಮೀರಾ ರಾಘವೇಂದ್ರ ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.
ಸಾಹಿತಿ ಕೆ.ಎಸ್. ಭಗವಾನ್ ಅವರು ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಎಸ್. ಮಹೇಶ್ ಮತ್ತು ಪರಿಷತ್ ಸದಸ್ಯ ಎಸ್. ಹರೀಶ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ವಕೀಲರಾಗಿ ವಕೀಲರ ಧಿರಿಸು (ಸಮವಸ್ತ್ರ) ಧರಿಸಿದ್ದ ಆರೋಪಿ ವಕೀಲರಾದ ಮೀರಾ ರಾಘವೇಂದ್ರ ಅವರು ಸಾಹಿತಿ ಕೆ.ಎಸ್. ಭಗವಾನ್ ಅವರ ಮುಖಕ್ಕೆ ನ್ಯಾಯಾಲಯ ಆವರಣದಲ್ಲೇ ಮುಖಕ್ಕೆ ಮಸಿ ಬಳಿಯುವ ಕೃತ್ಯ ಎಸಗಿದ್ದಾರೆ. ಇದು ನಿಜಕ್ಕೂ ವೃತ್ತಿ ದುರ್ನಡತೆ ಎಂದು ವರದಿಯಲ್ಲಿ ತಿಳಿಸಲಾಗಿದೆ.