ಸಂವಿಧಾನ ದಿನದಂದೇ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರಾದ ನ್ಯಾಯಾಂಗ ನೌಕರರು: ಮತದಾನದ ಹಕ್ಕು ಚಲಾಯಿಸಲು ಹೋದ ಮತದಾರರಿಗೆ ನಿರಾಸೆ !
ಸಂವಿಧಾನ ದಿನದಂದೇ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರಾದ ನ್ಯಾಯಾಂಗ ನೌಕರರು: ಮತದಾನದ ಹಕ್ಕು ಚಲಾಯಿಸಲು ಹೋದ ಮತದಾರರಿಗೆ ನಿರಾಸೆ !
ದಿನಾಂಕ 26.11.2024 ರಂದು ದೇಶಾದ್ಯಂತ ಸಂವಿಧಾನದ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅದೇ ದಿನ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಅಭ್ಯರ್ಥಿಗಳ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು.
ಮತದಾನದ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಲು ಹೋದ ಮತದಾರರು ಮತ ಚಲಾಯಿಸಲಾಗದೇ ನಿರಾಶರಾಗಿ ಮರಳಿದ ಘಟನೆ ಮಂಗಳೂರಿನಲ್ಲಿ ಜರಗಿದೆ. ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿದ್ದರೂ ತನಗೆ ಮತ ಚಲಾಯಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲವೆಂಬ ಷರಾದಿಂದ ಬಾಧಿತರಾದ ಸಂಘದ ಸದಸ್ಯರಾದ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಅವರು ಸಲ್ಲಿಸಿದ ದಾವೆಯಲ್ಲಿ ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಅಜ್ಞಾಪಕ ನಿರ್ಬಂಧಕಾಜ್ಞೆಯ ಅನ್ವಯ ಚುನಾವಣೆಯಲ್ಲಿ ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಸದರಿ ಸದಸ್ಯರಿಗೆ ಅವಕಾಶ ಪ್ರಾಪ್ತವಾಗಿತ್ತು.
ಆದರೆ ನ್ಯಾಯಾಲಯದ ಆದೇಶವನ್ನು ಚುನಾವಣಾ ಅಧಿಕಾರಿ ಪಾಲಿಸದ ಕಾರಣ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಅರ್ಜಿಯಲ್ಲಿ ಹೊರಡಿಸಿದ ಆದೇಶಕ್ಕೆ ಮಣಿದು ಪರಿಷ್ಕೃತ ಆದೇಶವನ್ನು ಹೊರಡಿಸಿ ಸದರಿ ಸದಸ್ಯರಿಗೆ ಮತದಾನದ ಹಾಗೂ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು.
ಆದರೆ ಚುನಾವಣಾಧಿಕಾರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ನೇಮಕಗೊಂಡ ಚುನಾವಣಾಧಿಕಾರಿ ಮತ್ತೆ ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿ ದಿನಾಂಕ 16.11.2024 ರಂದು ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಉಳಿದ ಇಲಾಖೆಗಳಿಗೆ ಚುನಾವಣೆ ನಡೆಸಿದ್ದರು. ಹಾಗೂ ನ್ಯಾಯಾಂಗ ಇಲಾಖೆಯ ಚುನಾವಣೆಯನ್ನು ಕಾದಿರಿಸಲಾಗಿದೆ ಎಂಬ ಪತ್ರಿಕಾ ಪ್ರಕಟಣೆ ನೀಡಿದ್ದರು.
ಈ ಮಧ್ಯೆ, ಪದಾಧಿಕಾರಿಗಳ ಚುನಾವಣೆಗೆ ಪ್ರಕಟಣೆ ಹೊರಡಿಸಲಾಯಿತು. ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸಿ ತನಗೆ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕೆಂದು ಕೋರಿ ಮತ್ತು ಮತ್ತೋರ್ವ ಅಭ್ಯರ್ಥಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ದಿನಾಂಕ 26.11.2024ರೊಳಗೆ ಚುನಾವಣೆ ನಡೆಸುವಂತೆ ಆಜ್ಞಾಪಕ ನಿರ್ಬಂಧಕಾಜ್ಞೆ ಆದೇಶ ನೀಡಿತು.
ಆದರೆ ಸದರಿ ಆದೇಶವನ್ನು ಪಾಲಿಸುವ ಬದಲು ಮಾನ್ಯ ಹೈಕೋರ್ಟಿಗೆ ಸಂಘದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ರಿಟ್ ಅರ್ಜಿ ಸಲ್ಲಿಸಿದರು. ಎದುರುದಾರರಿಗೆ ತುರ್ತು ನೋಟಿಸ್ ನೀಡುವಂತೆ ಆದೇಶಿಸಿದ ಹೈಕೋರ್ಟ್ ದಿನಾಂಕ 22.11.2024 ರ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ಆದೇಶಕ್ಕೆ ಮುಂದಿನ ವಿಚಾರಣಾ ದಿನಾಂಕದ ವರೆಗೆ ತಡೆಯಾಜ್ಞೆ ನೀಡಿದ್ದು ದಿನಾಂಕ 26.11.2024ರಂದು ಚುನಾವಣೆ ನಡೆಸಿದ್ದಲ್ಲಿ ಸದರಿ ಚುನಾವಣೆ ರಿಟ್ ಅರ್ಜಿಯ ತೀರ್ಮಾನಕ್ಕೆ ಒಳಪಟ್ಟಿದೆ ಎಂಬ ಆದೇಶ ಹೊರಡಿಸಿತು.
ನ್ಯಾಯಾಂಗ ಇಲಾಖೆಯ ನೌಕರರ ಚುನಾವಣಾ ವಿವಾದದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಹಾಗೂ ಶಿರಸ್ತೆದಾರ್ ಅವರು ಸಲ್ಲಿಸಿದ ದಾವೆಯಲ್ಲಿ ನೀಡಿದ ಅಜ್ಞಾಪಕ ನಿರ್ಬಂಧಕಾಜ್ಞೆ ಆದೇಶ ಊರ್ಜಿತದಲ್ಲಿ ಇರುವಾಗಲೇ ಚುನಾವಣಾ ಅಧಿಕಾರಿಯು ಪದಾಧಿಕಾರಿಗಳ ಚುನಾವಣೆಯ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು ಸದರಿ ಪಟ್ಟಿಯಲ್ಲಿ ನ್ಯಾಯಾಂಗ ಇಲಾಖೆಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ.
ಚುನಾವಣಾ ಅಧಿಕಾರಿಯ ಈ ಕೃತ್ಯದಿಂದ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ಮಾಡುವ ಸಾಂವಿಧಾನಿಕ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಇಲಾಖೆಯ ನೌಕರರ ಚುನಾವಣೆಗೆ ತಡೆಯಾಜ್ಞೆ ಪಡೆದು ಅವರನ್ನು ಮತದಾನದ ಪವಿತ್ರ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವುದು ಸ್ಪಷ್ಟವಾಗುತ್ತದೆ.
ನ್ಯಾಯಾಂಗ ಇಲಾಖೆಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸುವ ಮೂಲಕ ಚುನಾವಣಾಧಿಕಾರಿಯು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ತೀರ್ಪನ್ನು ತಾನೇ ನೀಡಿದಂತಾಗಿದೆ.
ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿದ ಚುನಾವಣಾ ಅಧಿಕಾರಿಗೆ ಮತ್ತೆ ಜೈಲು ಶಿಕ್ಷೆ ಹಾಗೂ ಆಸ್ತಿ ಜಪ್ತಿಯ ಆತಂಕ ಎದುರಾಗಿದೆ.