ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್: ಹೈಕೋರ್ಟ್
ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್: ಹೈಕೋರ್ಟ್
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅತ್ಯಾಚಾರ(ರೇಪ್) ಎಂದು ಪರಿಗಣಿಸಲಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್ ನಾಗಪುರ ವಿಭಾಗೀಯ ಪೀಠದ ನ್ಯಾ. ಜಿ.ಎ. ಸನಪ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ 10 ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ಸಂತ್ರಸ್ತೆ ತನ್ನ ಪತ್ನಿಯೇ ಆಗಿದ್ದರೂ ಅಪ್ರಾಪ್ತೆಯ ಜೊತೆಗಿನ ಲೈಂಗಿಕ ಕ್ರಿಯೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಸಂತ್ರಸ್ತೆ ಮಹಾರಾಷ್ಟ್ರದ ವಾರ್ಧಾದಲ್ಲಿ ವಾಸವಾಗಿದ್ದು, ನೆರ ಮನೆಯ ಆರೋಪಿ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದ. ಮೂರು ನಾಲ್ಕು ವರ್ಷಗಳ ಕಾಲ ಪ್ರೀತಿಯಲ್ಲಿದ್ದರೂ ಲೈಂಗಿಕ ಕ್ರಿಯೆಗೆ ಸಂತ್ರಸ್ತೆ ಒಪ್ಪಿಗೆ ನೀಡಿರಲಿಲ್ಲ.
2019ರಲ್ಲಿ ದೂರು ದಾಖಲಾಗುವ ಮುನ್ನ ಆರೋಪಿಯು ನೆರೆ ಹೊರೆಯ ಕೆಲವೇ ಕೆಲವು ನಿವಾಸಿಗಳ ಸಮ್ಮುಖದಲ್ಲಿ ಬಾಡಿಗೆ ಕೋಣೆಯಲ್ಲಿ ನಕಲಿ ಮದುವೆ ಕಾರ್ಯಕ್ರಮವನ್ನು ಆಯೋಜಿಸಿದ್ದ.
ಮದುವೆಯಾದ ಬಳಿಕ ಆರೋಪಿ ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇದರಲ್ಲಿ ದೈಹಿಕ ಹಲ್ಲೆ ಮತ್ತು ಗರ್ಭ ಪಾತವೂ ಸೇರಿದೆ. ಅಲ್ಲದೆ, ಮಗುವಾದ ಬಳಿಕ ಅದರ ತಂದೆ ನಾನಲ್ಲ ಎಂದೂ ಸಹ ಹೇಳಿದ್ದ. ಈ ಹಿನ್ನೆಲೆಯಲ್ಲಿ 2019ರ ಮೇ ತಿಂಗಳಿನಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ತಮ್ಮಿಬ್ಬರ ಲೈಂಗಿಕತೆಯು ಸಂಪೂರ್ಣ ಒಪ್ಪಿಗೆಯಿಂದ ನಡೆದಿತ್ತು. ಮತ್ತು ಆರೋಪಿ ತನ್ನ ಹೆಂಡತಿ ಎಂದು ಆತ ಅಭಿರಕ್ಷೆ ಪಡೆದುಕೊಂಡಿದ್ದ. ಆದರೆ, ಈ ಡಿಫೆನ್ಸ್‌ನ್ನು ತಳ್ಳಿ ಹಾಕಿದ ನ್ಯಾಯಪೀಠ, ಆರೋಪಿ ಮತ್ತು ಸಂತ್ರಸ್ತೆ ಸಂಬಂಧದಿಂದ ಜನಿಸಿದ ಮಗುವಿನ ಜೈವಿಕ ಪೋಷಕರು ಅವರೇ ಎಂದು ಡಿಎನ್‌ಎ ದೃಢಪಡಿಸಿದೆ ಎಂಬುದನ್ನು ಗಮನಿಸಿತ್ತು.