ಪರಿಶಿಷ್ಟರ ಜಾತಿ ನಿಂದನೆ: ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ ಮಂಗಳೂರಿನ ಜಿಲ್ಲಾ ವಿಶೇಷ ನ್ಯಾಯಾಲಯ
ಪರಿಶಿಷ್ಟರ ಜಾತಿ ನಿಂದನೆ: ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ ಮಂಗಳೂರಿನ ಜಿಲ್ಲಾ ವಿಶೇಷ ನ್ಯಾಯಾಲಯ
ಪರಿಶಿಷ್ಟರ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಈ ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಪ್ರಕರಣದ ವಿವರ:
ಆರೋಪಿ ಶಶಿಧರ್ ಎಂ. ವಿರುದ್ಧ 23-06-2021ರಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದರು ಎಂದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದೂರುದಾರ ಸಂತ್ರಸ್ತೆ ನೆಲ್ಲಿಕಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ಅವರು ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದರು. ದಿನಾಂಕ 22-06-2021ರಂದು ಪಂಚಾಯತ್‌ನಲ್ಲಿ ಸಾಮಾನ್ಯ ಸಭೆ ನಡೆದ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ದೂರುದಾರ ಸುಶೀಲಾ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ 21 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಆರೋಪಿ ಪರವಾಗಿ ಒಂದು ದಾಖಲೆಯನ್ನು ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದನ್ನು ಸಾಕ್ಷಿಗಳು ಒಪ್ಪಿಕೊಂಡರು. ಮಾತ್ರವಲ್ಲದೆ, ದೂರುದಾರರು ಸ್ವತಃ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿ, ಒಂಬುಡ್ಸ್‌ಮನ್ ತನಿಖೆಯಿಂದ ತಪ್ಪಿತಸ್ಥೆ ಎಂದು ದೃಢವಾಗಿತ್ತು.
ದೂರುದಾರೆ ಸುಶೀಲಾ ಮತ್ತು ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಅವರು ಸೇರಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಗಟ್ಟಲೆ ಹಣದ ದುರುಪಯೋಗ ಮಾಡಿ ಪಂಚಾಯತ್‌ಗೆ ವಂಚಿಸಿದ್ದು ಸಾಬೀತಾಗಿದ್ದು, ಈ ದಾಖಲೆಯನ್ನು ಸಾಕ್ಷಿಗಳು ಒಪ್ಪಿಕೊಂಡಿದ್ದರು. ದೂರುದಾರೆ ಮತ್ತು PDO ಒಟ್ಟಾಗಿ ರೂ. 1.98 ಲಕ್ಷ ಮರು ಪಾವತಿಸಲು ಆದೇಶವಾಗಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದಾಗಿ ಪಿಡಿಒ ಒಪ್ಪಿಕೊಂಡಿದ್ದರು.
ಆರೋಪಿಯು ಘಟನೆಯನ್ನು ಸ್ವತಃ ಒಪ್ಪಿಕೊಂಡಿದ್ದರೂ, ತನಗೆ ದೂರುದಾರರ ವಿರುದ್ಧ ಯಾವುದೇ ಜಾತಿ ನಿಂದನೆ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿಕೊಂಡಿದ್ದರು. ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮಾನ್ಯ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆರೋಪಿಯ ಪರವಾಗಿ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹರ್ಷ ಕುಮಾರ್ ಅವರು ವಾದಿಸಿದ್ದರು.