
ಸೌಜನ್ಯ ಪರ ಸಭೆ, ಪ್ರತಿಭಟನೆ ನಡೆಸಲು ಯಾವುದೇ ಅಡ್ಡಿ ಇಲ್ಲ: ಪೊಲೀಸರಿಂದ ವ್ಯಾಪ್ತಿ ಮೀರಿ ಅಕ್ರಮ ನೋಟೀಸ್: ಕರ್ನಾಟಕ ಹೈಕೋರ್ಟ್
ಸೌಜನ್ಯ ಪರ ಸಭೆ, ಪ್ರತಿಭಟನೆ ನಡೆಸಲು ಯಾವುದೇ ಅಡ್ಡಿ ಇಲ್ಲ: ಪೊಲೀಸರಿಂದ ವ್ಯಾಪ್ತಿ ಮೀರಿ ಅಕ್ರಮ ನೋಟೀಸ್: ಕರ್ನಾಟಕ ಹೈಕೋರ್ಟ್
ಬೆಳ್ತಂಗಡಿಯ ಕುಮಾರಿ ಸೌಜನ್ಯ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಂಜೆ ಬೆಂಗಳೂರಿನ ಸಭಾಂಗಣವೊಂದರಲ್ಲಿ ಆಯೋಜಿಸಿರುವ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರಂ ಪೊಲೀಸರು ನೀಡಿದ್ದ ನೋಟೀಸ್ ಕುರಿತು ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಸಾಹಿತಿ, ಚಿಂತಕ, ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯ ಭಾಸ್ಕರ್ ಅವರ ಪರವಾಗಿ ಈ ಅರ್ಜಿ ಸಲ್ಲಿಸಲಾಗಿತ್ತು. ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ಅರ್ಜಿದಾರರ ಪರ ವಾದಿಸಿದ್ದರು.
ಸೌಜನ್ಯ ನ್ಯಾಯಕ್ಕಾಗಿ ಮತ್ತು ಊಳಿಗಮಾನ್ಯ ದರ್ಪ ವಿರುದ್ಧ ಕರೆಯಲಾಗಿದ್ದ ಸಾಹಿತಿಗಳು, ಚಿಂತಕರು, ಹೋರಾಟಗಾರರ ಸಮಾಲೋಚನಾ ಸಭೆಗೆ ಅಡ್ಡಿಪಡಿಸಿ ಶೇಷಾದ್ರಿಪುರ ಪೊಲೀಸರು ಸಂಘಟಕರಿಗೆ ವಾಟ್ಸ್ಯಾಪ್ ಮೂಲಕ ನೋಟೀಸ್ ಜಾರಿಗೊಳಿಸಿದ್ದರು. ಹೈಕೋರ್ಟ್ ರಿಟ್ ಅರ್ಜಿ ಆದೇಶದ ಪ್ರಕಾರ ಜಸ್ಟಿಸ್ ಫಾರ್ ಸೌಜನ್ಯ ಹೆಸರಲ್ಲಿ ಯಾರೂ ಯಾವುದೇ ಸಭೆ, ಪ್ರತಿಭಟನೆ ನಡೆಸಬಾರದು. ಒಂದು ವೇಳೆ ಸಭೆ ನಡೆಸಿದರೆ ಕಾನೂನು ಕ್ರಮ ಗ್ಯಾರಂಟಿ ಎಂದು ಪೊಲೀಸರು ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿದ್ದರು.
ನೋಟೀಸ್ ಮೀರಿ ಸಭೆ ನಡೆಸಿದರೆ ಅಥವಾ ಸಭಾಂಗಣ ನೀಡಿದರೆ ಬಂಧನ ಮಾಡುವುದಾಗಿ ಪೊಲೀಸರು ಫೋನ್ ಮೂಲಕ ಬೆದರಿಕೆ ಹಾಕಿದ್ದರು. ಪೊಲೀಸರರ ನೋಟೀಸ್ ಕಾನೂನುಬಾಹಿರವಾಗಿದೆ ಮತ್ತು ಈ ಮೂಲಕ ಹೋರಾಟಗಾರರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಪೊಲೀಸರ ನೋಟೀಸ್ ವಿಕೃತ ಮನೋಸ್ಥಿತಿಯಿಂದ ಕೂಡಿದ್ದು, ದುರುದ್ದೇಶಪೂರಿತವಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ವಾದ ಮಂಡಿಸಲಾಗಿತ್ತು.
ಪ್ರಸ್ತಾಪಿತ ಸೌಜನ್ಯ ನ್ಯಾಯಕ್ಕಾಗಿ ನಡೆಸುತ್ತಿರುವ ಸಭೆಯು ಕಚೇರಿಯೊಳಗೆ ನಡೆಯುತ್ತಿರುವ ಸಭೆಯಾಗಿದೆ. ಪ್ರತಿಭಟನೆ ಇಲ್ಲದೇ ಇದ್ದರೂ ದುರುದ್ದೇಶಪೂರ್ವಕವಾಗಿ ನೋಟೀಸ್‌ನಲ್ಲಿ ಪ್ರತಿಬಟನೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಒಳಾಂಗಣ ಚಟುವಟಿಕೆಯನ್ನು ನಿಯಂತ್ರಿಸುವಂತಿಲ್ಲ. ಪೊಲೀಸರು ವ್ಯಾಪ್ತಿ ಮೀರಿ ನೋಟಿಸ್ ನೀಡಿದ್ಧಾರೆ ಎಂಬುದು ಸ್ಪಷ್ಟವಾಗಿದೆ ಎಂದು ರಿಟ್ ಅರ್ಜಿನಲ್ಲಿ ಹೇಳಲಾಗಿದೆ.
ಅರ್ಜಿಯಲ್ಲಿ ಮಂಡಿಸಲಾದ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.