.jpg)
ಪಿತ್ರಾರ್ಜಿತ ಆಸ್ತಿ ಖರೀದಿಯಲ್ಲಿ ಕುಟುಂಬದವರಿಗೆ ಮೊದಲ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಪಿತ್ರಾರ್ಜಿತ ಆಸ್ತಿ ಖರೀದಿಯಲ್ಲಿ ಕುಟುಂಬದವರಿಗೆ ಮೊದಲ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಲೇಖಕರು: ಶ್ರೀ ವಿದ್ಯಾಧರ ವಿ.ಎಸ್., ವಕೀಲರು, ಕರ್ನಾಟಕ ಹೈಕೋರ್ಟ್.
ಆಸ್ತಿ ಉತ್ತರಾಧಿಕಾರದ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲೇ ಮಹತ್ವದ ಬದಲಾವಣೆ ತರುವಂತಹ ತೀರ್ಪುಗಳಲ್ಲಿ "ಬಾಬು ರಾಮ್ ಮತ್ತು ಸಂತೋಖ್ ಸಿಂಗ್" ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮೈಲುಗಲ್ಲಾಗಿದೆ.
ಪಿತ್ರಾರ್ಜಿತ ಕೃಷಿ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಮೊದಲು ಆ ಭೂಮಿಯನ್ನು ಖರೀದಿಸುವ ಮೊದಲ ಆದ್ಯತೆಯ ಹಕ್ಕನ್ನು ಆ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಉಚ್ಚರಿಸಿದೆ.
ಬಾಬು ರಾಮ್ ಮತ್ತು ಸಂತೋಖ್ ಸಿಂಗ್ (2019) 14 ಎಸ್‌ಸಿಸಿ 162 ಪ್ರಕರಣದಲ್ಲಿ ನೀಡಲಾದ ಈ ತೀರ್ಪು ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಸೆಕ್ಷನ್ 22 ಕೃಷಿ ಭೂಮಿಗೂ ಅನ್ವಯವಾಗುತ್ತದೆ ಎಂದು ಹೇಳುವ ಮೂಲಕ ಬಹಳ ಸಮಯದಿಂದ ಇದ್ದ ಕಾನೂನು ಗೊಂದಲವನ್ನು ನಿವಾರಿಸಿದೆ.
ಕಳೆದ ಹಲವು ದಶಕಗಳಿಂದ, ಭಾರತದ ನ್ಯಾಯಾಲಯಗಳು ಕೃಷಿ ಭೂಮಿಯು ಕಾನೂನುಬದ್ಧ ವಾರಸುದಾರರ ಆದ್ಯತೆಯ ಆದ್ಯತೆಯ ಹಕ್ಕಿನ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಬೇರೆ ಬೇರೆ ತೀರ್ಪುಗಳನ್ನು ನೀಡಿದ್ದವು. ಕೆಲವು ಹೈಕೋರ್ಟ್‌ಗಳು, ಸೆಕ್ಷನ್ 22 ಕೇವಲ ಕೃಷಿಯೇತರ ಆಸ್ತಿಗಳಿಗೆ ಮಾತ್ರ ಸೀಮಿತ ಎಂದು ಹೇಳಿದರೆ ಇನ್ನು ಕೆಲವು ಹೈಕೋರ್ಟ್‌ಗಳು ಕೃಷಿ ಭೂಮಿಯನ್ನೂ ಒಳಗೊಂಡಂತೆ ಸ್ಥಿರಾಸ್ತಿಗಳಿಗೂ ಇದು ಅನ್ವಯಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದವು. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು, ಈ ಗೊಂದಲವನ್ನು ಸಂಪೂರ್ಣವಾಗಿ ನಿವಾರಿಸಿತು. ಇದರಿಂದಾಗಿ ಕುಟುಂಬದ ಒಡೆತನದಲ್ಲಿರುವ ಕೃಷಿ ಭೂಮಿಯನ್ನು ಕಾನೂನುಬದ್ಧ ವಾರಸುದಾರರಿಗೆ ಮೊದಲು ಕೇಳದೆ ಮೂರನೇ ವ್ಯಕ್ತಿಗಳಿಗೆ ಸುಲಭವಾಗಿ ಮಾರಾಟ ಮಾಡುವುದನ್ನು ತಪ್ಪಿಸುತ್ತದೆ.
ಕುಟುಂಬ ಕಲಹದಿಂದ ಹೊಮ್ಮಿದ ಮಹತ್ವದ ತೀರ್ಪು
ಈ ಪ್ರಕರಣದ ಮೂಲ ಇಬ್ಬರು ಸಹೋದರರ ನಡುವಿನ ಆಸ್ತಿ ಜಗಳ, ಸಂತೋಖ್ ಸಿಂಗ್ ಮತ್ತು ನಾಥು ರಾಮ್ ಎಂಬ ಇಬ್ಬರು ಸಹೋದರರು ತಮ್ಮ ತಂದೆಯಿಂದ ಕೃಷಿ ಭೂಮಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದರು. ಇಬ್ಬರೂ ಸಹೋದರರು ಭೂಮಿಯನ್ನು ಸಮವಾಗಿ ಹಂಚಿಕೊಂಡು ಅನುಭವಿಸಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ನಾಥು ರಾಮ್ ಮಾತ್ರ ತನ್ನ ಪಾಲಿನ ಭೂಮಿಯನ್ನು 1991 ರಲ್ಲಿ ಬಾಬು ರಾಮ್ ಎಂಬ ಮೂರನೇ ವ್ಯಕ್ತಿಗೆ ಮಾರಾಟ ಮಾಡಲು ನಿರ್ಧರಿಸಿ, ನೋಂದಾಯಿತ ಮಾರಾಟ ಪತ್ರವನ್ನು ಮಾಡಿಕೊಟ್ಟರು.
ಇದನ್ನು ವಿರೋಧಿಸಿ ಸಂತೋಖ್ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದರು. ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 22 ರ ಪ್ರಕಾರ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಮೊದಲು ಕಾನೂನು ಬದ್ಧ ವಾರಸುದಾರರಿಗೆ ಖರೀದಿಸುವ ಮೊದಲ ಹಕ್ಕಿದೆ ಎಂದು ವಾದಿಸಿದರು. ಆದರೆ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ, ಕೃಷಿ ಭೂಮಿಗೆ ರಾಜ್ಯ ಕಾನೂನುಗಳು ಅನ್ವಯಿಸುತ್ತವೆ, ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಲ್ಲ ಎಂದು ಹೇಳಿ ಬಾಬು ರಾಮ್ ಪರವಾಗಿ ತೀರ್ಪು ನೀಡಿತು.
ಇದರಿಂದ ಬಾಧಿತರಾದ ಸಂತೋಖ್ ಸಿಂಗ್, ಮೇಲಿನ ಕೋರ್ಟ್‌ಗೆ ಅಪೀಲು ಸಲ್ಲಿಸಿದರು.
ನಂತರ ಜಿಲ್ಲಾ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಲಾಯಿಸಿ, ಸಂತೋಖ್ ಸಿಂಗ್ 60,000 ರೂಪಾಯಿಗಳನ್ನು ಪಾವತಿಸಿ ಭೂಮಿಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪು ನೀಡಿತು, ಇದರಿಂದ ಕುಟುಂಬದ ಹೊರಗಿನ ಮೂರನೇ ವ್ಯಕ್ತಿ ಬಾಬು ರಾಮ್ ಜೊತೆಗಿನ ಮಾರಾಟವು ರದ್ದಾಯಿತು. ಈ ತೀರ್ಪನ್ನು ಪ್ರಶ್ನಿಸಿ ಬಾಬು ರಾಮ್ ಹಿಮಾಚಲ ಪ್ರದೇಶದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಯೂ ಕೂಡಾ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಲಾಯಿತು ಮತ್ತು ಸೆಕ್ಷನ್ 22 ಕೃಷಿ ಭೂಮಿ ಸೇರಿದಂತೆ ಎಲ್ಲಾ ರೀತಿಯ ಸ್ಥಿರಾಸ್ತಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿತು.
ಅಂತಿಮವಾಗಿ, ಬಾಬು ರಾಮ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದಾಗ, ಈ ವಿಷಯವನ್ನು ಅಂತಿಮ ತೀರ್ಮಾನಕ್ಕಾಗಿ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅದರ ಪರಿಣಾಮಗಳು
ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಎರಡು ಮುಖ್ಯ ಕಾನೂನು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿತ್ತು. ಮೊದಲನೆಯದಾಗಿ: ಹಿಂದೂ ಉತ್ತರಾಧಿಕಾರಿ ಕಾಯ್ದೆ ಸೆಕ್ಷನ್ 22 ಕೃಷಿ ಭೂಮಿಗೂ ಅನ್ವಯಿಸುತ್ತದೆಯೇ ? ಎಂಬುದಾದರೇ ಎರಡನೆಯದಾಗಿ, ರಾಜ್ಯ ಭೂ ಕಾನೂನುಗಳು ಹಿಂದೂ ಉತ್ತರಾಧಿಕಾರಿ ಕಾನೂನಿಗಿಂತ ಮೇಲುಗೈ ಸಾಧಿಸುತ್ತವೆಯೇ? ಏಕೆಂದರೆ ಕೃಷಿ ಭೂಮಿಗೆ ಸಂಬಂಧಿಸಿದ ಕಾನೂನುಗಳು ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಬರುತ್ತವೆ. ಹೀಗಾಗಿ, ಎಚ್‌ಎಸ್‌ಎ ನೀಡುವ ಉತ್ತರಾಧಿಕಾರದ ಹಕ್ಕುಗಳು ರಾಜ್ಯ ಕಾನೂನುಗಳಿಗಿಂತ ಮುಖ್ಯವಾಗುತ್ತವೆಯೇ ಎಂದು ಕೋರ್ಟ್ ನಿರ್ಧರಿಸಬೇಕಿತ್ತು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಅಂತಿಮವಾಗಿ ಹೀಗೆ ತೀರ್ಪು ನೀಡಿತು:
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್ 22 ಕೃಷಿ ಭೂಮಿಗೂ ಅನ್ವಯಿಸುತ್ತದೆ. ಉತ್ತರಾಧಿಕಾರದ ವಿಷಯದಲ್ಲಿ ಹಿಂದೂ ಕಾನೂನು ಸ್ಥಿರಾಸ್ತಿಯ ಪ್ರಕಾರಗಳನ್ನು ಬೇರ್ಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಆಸ್ತಿಯು ಮನೆಯೇ ಆಗಿರಲಿ, ವಾಣಿಜ್ಯ ಕಟ್ಟಡವಾಗಿರಲಿ ಅಥವಾ ಕೃಷಿ ಭೂಮಿಯೇ ಆಗಲಿ, ಉತ್ತರಾಧಿಕಾರದ ನಿಯಮಗಳು ಒಂದೇ ಆಗಿರುತ್ತವೆ ಎಂದಿತು.
ಮುಂದುವರೆದು, ರಾಜ್ಯ ಸರ್ಕಾರಗಳು ಭೂ ವರ್ಗಾವಣೆಗೆ ಸಂಬಂಧಿಸಿದ ಕಾನೂನುಗಳನ್ನು ಮಾಡಬಹುದು. ಆದರೆ ಉತ್ತರಾಧಿಕಾರದ ಕಾನೂನುಗಳು ಬೇರೆ ರೀತಿಯಲ್ಲಿವೆ, ಕೃಷಿ ಭೂಮಿಯ ಮಾರಾಟ ಮತ್ತು ಹಂಚಿಕೆಯನ್ನು ರಾಜ್ಯ ಸರ್ಕಾರಗಳು ನಿಯಂತ್ರಿಸಬಹುದು ಎಂಬುದನ್ನು ಕೋರ್ಟ್ ಒಪ್ಪಿಕೊಂಡಿತು ಆದರೆ ಉತ್ತರಾಧಿಕಾರದ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ, ಈ ಬಗ್ಗೆ ಕಾನೂನುಗಳನ್ನು ರೂಪಿಸಲು ಸಂಸತ್ತಿಗೆ ಅಧಿಕಾರವಿದೆ ಎಂದು ಹೇಳಿತು.
ಬಾಬು ರಾಮ್ ಜೊತೆಗಿನ ಜಮೀನಿನ ಮಾರಾಟವು ಕಾನೂನು ಬಾಹಿರವಾಗಿದೆ ಎಂದು ಹೇಳಿ ಕೆಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು ಆ ಮೂಲಕ ಕಾನೂನುಬದ್ಧ ವಾರಸುದಾರರಾದ ಸಂತೋಖ್ ಸಿಂಗ್‌ಗೆ ಪಿತ್ರಾರ್ಜಿತ ಭೂಮಿಯನ್ನು ಖರೀದಿಸುವ ಮೊದಲ ಆದ್ಯತೆಯ ಹಕ್ಕು ಸಿಕ್ಕಂತಾಯಿತು. ಇದರಿಂದ ಭೂಮಿ ಆ ಕುಟುಂಬದಲ್ಲಿಯೇ ಉಳಿಯುವಂತಾಯಿತು.
ಈ ತೀರ್ಪು ಲಕ್ಷಾಂತರ ಕುಟುಂಬಗಳಿಗೆ ಏಕೆ ಮುಖ್ಯ?
ಈ ತೀರ್ಪು ಭಾರತದಲ್ಲಿ ಆಸ್ತಿಯ ಉತ್ತರಾಧಿಕಾರದ ವಿಷಯದಲ್ಲಿ ಬಹಳ ಮುಖ್ಯವಾದದ್ದು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ, ಕೃಷಿ ಭೂಮಿಯೇ ಮುಖ್ಯ ಆಸ್ತಿಯಾಗಿದೆ ಇದು ಅವರ ಜೀವನ ಆಧಾರವೂ ಆಗಿರುವುದರಿಂದ ಜನರಿಗೆ ಇದು ತುಂಬಾ ಸಹಾಯಕವಾಯಿತು.
ಇನ್ನು ಈ ತೀರ್ಪು ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದ ಸದಸ್ಯರೇ ಉಳಿಸಿಕೊಳ್ಳಲು ಸಹಾಯ ಮಾಡಿತು ಹಾಗೂ ಇದರಿಂದಾಗಿ ಆಸ್ತಿ ವಿಭಜನೆ ಆಗುವುದು ಮತ್ತು ಕುಟುಂಬದ ಹೊರಗಿನ ಮೂರನೇ ವ್ಯಕ್ತಿಗಳಿಗೆ ಬಲವಂತವಾಗಿ ಮಾರಾಟ ಮಾಡುವುದು ತಪ್ಪಿತು.
ಹಲವಾರು ಕಾನೂನು ಗೊಂದಲ ನಿವಾರಣೆ:
ಸುಪ್ರೀಂ ಕೋರ್ಟ್‌ನ ಈ ತೀರ್ಪು, ಉತ್ತರಾಧಿಕಾರ ಕಾನೂನಿನ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿತು ಹಾಗೂ ಹೈಕೋರ್ಟ್‌ಗಳು ಈ ಹಿಂದೆ ನೀಡಿದ್ದ ಬೇರೆ ಬೇರೆ ತೀರ್ಪುಗಳಿಂದ ಉಂಟಾಗಿದ್ದ ಸಮಸ್ಯೆಗಳನ್ನು ಸರಿಪಡಿಸಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳಿಗೂ ಒಂದೇ ರೀತಿಯ ಕಾನೂನು ಅನ್ವಯವಾಗುವಂತೆ ಮಾಡಿತು.
ಅನೇಕ ಸಹೋದರರು, ಸಹೋದರಿಯರು, ಕುಟುಂಬದ ವಿಧವೆಯರು, ಹೆಣ್ಣುಮಕ್ಕಳು ಮತ್ತು ಇತರ ವಾರಸುದಾರರು ತಮ್ಮ ಪಿತ್ರಾರ್ಜಿತ ಭೂಮಿಯನ್ನು ಕುಟುಂಬದ ಕಲಹಗಳಲ್ಲಿ ತಮ್ಮವರನ್ನೇ ಹಿಂದಕ್ಕೆ ತಳ್ಳಿ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿ ಹಗೆತನವನ್ನು ಬೆಳೆಸುವ ಪರಂಪರೆಗೆ ತಡೆ ನೀಡಿತು.
ಆದ್ಯತೆಯ ಹಕ್ಕು ಸಂಪೂರ್ಣ ಹಕ್ಕಲ್ಲ
ಆದ್ಯತೆಯ ಹಕ್ಕುಗಳು ಒಂದು ಅನುಕೂಲಕರವಾದ ಹಕ್ಕಾಗಿವೆ ಆದರೆ ಅವು ಅನಿಯಂತ್ರಿತವಲ್ಲ, ಅವುಗಳು ಕೆಲವು ಮಿತಿಗಳನ್ನು ಹೊಂದಿವೆ.
* ಪಿತ್ರಾರ್ಜಿತ ಆಸ್ತಿ ಪ್ರಕರಣದಲ್ಲಿ, ವಾರಸುದಾರರು ಮಾರುಕಟ್ಟೆ ಬೆಲೆಗೆ ಆಸ್ತಿಯನ್ನು ಖರೀದಿಸಲು ಸಿದ್ಧರಿರಬೇಕು. ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಆಸ್ತಿ ಸಿಗಬೇಕೆಂದು ಅವರು ನಿರೀಕ್ಷಿಸಲು ಸಾಧ್ಯವಿಲ್ಲ.
* ಒಂದು ವೇಳೆ ಮಾರುವ ಮೊದಲು ವಾರಸುದಾರರು ಒಪ್ಪಿಗೆ ನೀಡಿ ಈಗ ಸೆಕ್ಷನ್ 22 ರಡಿಯಲ್ಲಿ ತನಗೆ ಮಾರುವಂತೆ ಕೇಳಲು ಸಾಧ್ಯವಿಲ್ಲ.
* ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 22 ಕೇವಲ ಸಹ-ವಾರಸುದಾರರ ನಡುವಿನ ಮಾರಾಟಕ್ಕೆ ಮಾತ್ರ ಅನ್ವಯಿಸುತ್ತದೆ.
* ಕಾಲಮಿತಿ ಕಾಯ್ದೆಯ ಅಡಿಯಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ಈ ಆದ್ಯತೆಯ ಹಕ್ಕು ದೊರೆಯುತ್ತದೆ ಹೊರತು ಹತ್ತಾರು ವರ್ಷಗಳ ನಂತರ ಮಾರಾಟ ಪ್ರಶ್ನಿಸಲು ಬರಲಾರದು.
ಆಸ್ತಿ ಉತ್ತರಾಧಿಕಾರ ಕಾನೂನಿನಲ್ಲಿ ಈ ತೀರ್ಪು ಐತಿಹಾಸಿಕ ಮೈಲಿಗಲ್ಲು
ಬಾಬು ರಾಮ್ ಮತ್ತು ಸಂತೋಖ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಭಾರತದ ಆಸ್ತಿ ಕಾನೂನಿನಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದೆ. ಪಿತ್ರಾರ್ಜಿತ ಭೂಮಿಯನ್ನು ಕುಟುಂಬದ ಸದಸ್ಯರೇ ಉಳಿಸಿಕೊಳ್ಳಬೇಕು ಎಂಬ ತತ್ವವನ್ನು ಇದು ಬಲವಾಗಿ ಪ್ರತಿಪಾದಿಸುತ್ತದೆ. ಕೃಷಿ ಭೂಮಿಯನ್ನು ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ಇತರ ಸ್ಥಿರಾಸ್ತಿಗಳಂತೆಯೇ ಪರಿಗಣಿಸುವಂತೆ ಮಾಡಿ ಪೂರ್ವಜರ ಆಸ್ತಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಿದೆ.
ಈ ತೀರ್ಪು ಮುಂದಿನ ದಿನಗಳಲ್ಲಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿವಾದಗಳನ್ನು ಕಡಿಮೆ ಮಾಡುತ್ತದೆ. ವಾರಸುದಾರರ ಕಾನೂನು ಹಕ್ಕುಗಳನ್ನು ಬಲಪಡಿಸಿ ಕುಟುಂಬದ ಆಸ್ತಿ ಅನಗತ್ಯವಾಗಿ ವಿಭಜನೆಯಾಗುವುದನ್ನು ತಪ್ಪಿಸುತ್ತದೆ. ಕಾನೂನು ತಜ್ಞರು ಮತ್ತು ಗ್ರಾಮೀಣ ಭಾಗದ ಭೂಮಾಲೀಕರಿಗೆ, ಈ ತೀರ್ಪು ಆಸ್ತಿ ಉತ್ತರಾಧಿಕಾರ ಕಾನೂನಿನ ಕ್ಷೇತ್ರದಲ್ಲಿ ಒಂದು ಪ್ರಮುಖ ಉಲ್ಲೇಖವಾಗಿದೆ.
ಲೇಖಕರು: ಶ್ರೀ ವಿದ್ಯಾಧರ ವಿ.ಎಸ್., ವಕೀಲರು, ಕರ್ನಾಟಕ ಹೈಕೋರ್ಟ್