
ಶರ್ಟ್ ಬಟನ್ ಹಾಕದ ವಕೀಲರಿಗೆ 6 ತಿಂಗಳ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠದ ಆದೇಶ
ಶರ್ಟ್ ಬಟನ್ ಹಾಕದ ವಕೀಲರಿಗೆ 6 ತಿಂಗಳ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠದ ಆದೇಶ
ಅಂಗಿಯ ಗುಂಡಿ (ಶರ್ಟ್ ಬಟನ್) ಹಾಕದೆ ನ್ಯಾಯಾಲಯಕ್ಕೆ ಬಂದಿದ್ದ ವಕೀಲರೊಬ್ಬರಿಗೆ ಅಲಹಾಬಾದ್ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಬಿ.ಆರ್. ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಸ್ಥಳೀಯ ವಕೀಲರಾದ ಅಶೋಕ್ ಪಾಂಡೆ ಎಂಬವರು 2021ರ ಆಗಸ್ಟ್ 18ರಂದು ತನ್ನ ಶರ್ಟ್ ಬಟನ್ ಧರಿಸದೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ಅಲ್ಲದೆ, ಸಹ ವಕೀಲರ ಜೊತೆಗೆ ಅನುಚಿತವಾಗಿ ವರ್ತಿಸಿದ್ದರು.
ಈ ಘಟನೆಯ ಬೆನ್ನಲ್ಲೇ, ಆರೋಪಿ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಆರೋಪಿ ವಕೀಲರು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೂ ಹಾಜರಾಗಿರಲಿಲ್ಲ.
ಆರೋಪಿ ವಕೀಲರ ವರ್ತನೆ ಮತ್ತು ನ್ಯಾಯಾಂಗಕ್ಕೆ ತೋರಿದ ಅಗೌರವವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ವಿಚಾರಣೆಗೂ ಹಾಜರಾಗದ ವಕೀಲರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಲ್ಲದೆ ರೂ. 2000/- ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ವಾಸದ ಶಿಕ್ಷೆಯನ್ನು ವಿಧಿಸಿದೆ.
ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟರ ಮುಂದೆ ಹಾಜರಾಗಲು ನಾಲ್ಕು ವಾರಗಳ ಗಡುವು ವಿಧಿಸಿದೆ. ಅಲಹಾಬಾದ್ ಹೈಕೋರ್ಟ್ ಹಾಗೂ ಅದರ ಲಕ್ನೋ ವಿಭಾಗೀಯ ಪೀಠದಲ್ಲಿ ವಕೀಲ ವೃತ್ತಿ ನಡೆಸುವುದನ್ನು ಏಕೆ ನಿರ್ಬಂಧಿಸಬಾರದು ಎಂಬ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದ್ದು, ಇದಕ್ಕೆ ಮೇ 1ರ ಒಳಗೆ ನೋಟೀಸ್‌ಗೆ ಉತ್ತರ ನೀಡಲು ಗಡುವು ನೀಡಲಾಗಿದೆ.