
ಕುಡಿತ ಮತ್ತಿನಲ್ಲಿ ಗೆಳೆಯನ ಜೊತೆ ಆತನ ಮನೆಗೆ ತೆರಳಿದ ಯುವತಿ: ಅತ್ಯಾಚಾರವಲ್ಲ, ಒಪ್ಪಿತ ಸೆಕ್ಸ್ ಎಂದ ಜಡ್ಜ್: ಅಲಹಾಬಾದ್ ಹೈಕೋರ್ಟ್ ವಿವಾದಿತ ತೀರ್ಪು
ಕುಡಿತ ಮತ್ತಿನಲ್ಲಿ ಗೆಳೆಯನ ಜೊತೆ ಆತನ ಮನೆಗೆ ತೆರಳಿದ ಯುವತಿ: ಅತ್ಯಾಚಾರವಲ್ಲ, ಒಪ್ಪಿತ ಸೆಕ್ಸ್ ಎಂದ ಜಡ್ಜ್: ಅಲಹಾಬಾದ್ ಹೈಕೋರ್ಟ್ ವಿವಾದಿತ ತೀರ್ಪು
ಪಾನಮತ್ತಳಾಗಿ ಸ್ವಯಂ ಪ್ರೇರಿತಳಾಗಿ ಸ್ನೇಹಿತನ ಜೊತೆಗೆ ಆತನ ಮನೆಗೆ ತೆರಳಿರುವುದು ಸ್ವಯಂ ಅಪಾಯಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ, ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಈ ವಿವಾದಿತ ತೀರ್ಪು ನೀಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ದೂಷಿಸಲಾಗಿದೆ.
ಇದೊಂದು ಒಪ್ಪಿತ ಸೆಕ್ಸ್. ಇದು ಅತ್ಯಾಚಾರವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆಯಾಗಿದ್ದಾರೆ. ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಯ ಭಾಗೀದಾರಿಕೆ ಮತ್ತು ವಕೀಲರ ವಾದ-ಪ್ರತಿವಾದ ಗಮನಿಸಿದಾಗ ಕುಡಿದ ನಶೆಯಲ್ಲಿ ಇದ್ದ ಆಕೆ ತನ್ನ ಸ್ನೇಹಿತನ ಮನೆಗೆ ಹೋಗುವ ಮೂಲಕ ಸ್ವಯಂ ತೊಂದರೆಯನ್ನು ಆಹ್ವಾನಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
2024ರ ಡಿಸೆಂಬರ್‌ನಲ್ಲಿ ದಿಲ್ಲಿಯ ರೆಸ್ಟೋರೆಂಟ್‌ಗೆ ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದ ನೋಯ್ಡಾ ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಈ ಬಗ್ಗೆ ಆಕೆ ದೂರು ನೀಡಿದ ಹಿನ್ನೆಲೆಯಲ್ಲಿ 2024ರ ಡಿಸೆಂಬರ್ 11ರಂದು ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಹೈಕೋರ್ಟ್ ಮುಂದೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.