.jpg)
ಪತ್ನಿಗೆ ಜೀವನಾಂಶ ನೀಡುವುದು ಪತಿಯ ಶಾಸನ ಬದ್ಧ ಕರ್ತವ್ಯ: ಯಾವುದೇ ಒಪ್ಪಂದ ಇದನ್ನು ತಪ್ಪಿಸಲಾಗದು- ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿಗೆ ಜೀವನಾಂಶ ನೀಡುವುದು ಪತಿಯ ಶಾಸನ ಬದ್ಧ ಕರ್ತವ್ಯ: ಯಾವುದೇ ಒಪ್ಪಂದ ಇದನ್ನು ತಪ್ಪಿಸಲಾಗದು- ಹೈಕೋರ್ಟ್ ಮಹತ್ವದ ತೀರ್ಪು
ತನ್ನ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದು ಪತಿಯ ಶಾಸನ ಬದ್ಧ ಕರ್ತವ್ಯ. ಇದನ್ನು ಯಾವುದೇ ಒಪ್ಪಂದದಿಂದ ತಪ್ಪಿಸಲಾಗದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಜೀವನಾಂಶ ಕೋರುವ ತನ್ನ ಹಕ್ಕನ್ನು ಪತ್ನಿಯು ಒಪ್ಪಂದದ ಮೂಲಕ ತ್ಯಜಿಸಿದ್ದರೂ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆ (ಡಿವಿ ಆಕ್ಟ್) ಪತ್ನಿಯ ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದಿಲ್ಲ ಎಂದು ತೀರ್ಪು ಹೇಳಿದೆ.
ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ನೀಡಿದ್ದ ಹಲವು ತೀರ್ಪುಗಳನ್ನು ಉಲ್ಲೇಖಿಸಿದ್ದ ನ್ಯಾಯಪೀಠ, ಕಾನೂನು ಬದ್ಧ ಜೀವನಾಂಶ ಪಡೆಯುವ ಹಕ್ಕನ್ನು ನಿರಾಕರಿಸುವ ಯಾವುದೇ ಒಪ್ಪಂದ ಮಾನ್ಯವಾಗುವುದಿಲ್ಲ. ಈ ಅಂಶದ ಕುರಿತ ಕಾನೂನು ನಿಲುವು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕೋರ್ಟ್ ಮುಂದೆ ಸಲ್ಲಿಸಿದ ರಾಜಿಯ ಭಾಗವಾಗಿ ಅಥವಾ ಯಾವುದೇ ಇತರ ರೀತಿಯಲ್ಲಿ ಪತ್ನಿ ಮತ್ತು ಪತಿಯ ನಡುವೆ ಒಪ್ಪಂದವಾದಾಗ, ಭವಿಷ್ಯದಲ್ಲಿ ಪತಿಯಿಂದ ಜೀವನಾಂಶ ಪಡೆಯುವುದಿಲ್ಲ ಎಂದು ಪತ್ನಿ ತನ್ನ ಜೀವನಾಂಶದ ಹಕ್ಕು ತ್ಯಾಗ ಮಾಡುತ್ತಾಳೆ. ಇಂತಹ ಒಪ್ಪಂದವು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.