
ಭಯೋತ್ಪಾದಕರ ವಿರುದ್ಧ 'ಸ್ಪೈವೇರ್' ಬಳಕೆ ತಪ್ಪಲ್ಲ: ಭದ್ರತೆ, ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವರದಿ ಬಹಿರಂಗವಿಲ್ಲ- ಸುಪ್ರೀಂ ಅಭಯ
ಭಯೋತ್ಪಾದಕರ ವಿರುದ್ಧ 'ಸ್ಪೈವೇರ್' ಬಳಸಿ: ಭದ್ರತೆ, ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವರದಿ ಬಹಿರಂಗವಿಲ್ಲ- ಸುಪ್ರೀಂ ಅಭಯ
ಭಯೋತ್ಪಾದಕರ ವಿರುದ್ಧ ಗೂಢಚರ್ಯೆ ತಂತ್ರಾಂಶ 'ಸ್ಪೈ ವೇರ್' ಬಳಸುವುದರಲ್ಲಿ ತಪ್ಪೇನಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧ ಪಟ್ಟಂತೆ ಯಾವುದೇ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಅದು ದೇಶದ ಜನತೆಗೆ ಅಭಯ ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯಕಾಂತ್ ಮತ್ತು ಎನ್ ಕೋಟೇಶ್ವರ ಸಿಂಗ್ ಅವರಿಂದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಖಾಸಗಿತನದ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಯಾರಿಗಾದರೂ ಆತಂಕ ಇದ್ದರೆ ಅದನ್ನು ಬಗೆಹರಿಸಬಹುದು ಎಂದು ಹೇಳಿತು.
ಆದರೆ ದೇಶದ ಭದ್ರತೆಗೆ ಸಂಬಂಧಿಸಿದ ವರದಿಯನ್ನು ಬೀದಿಗಳಲ್ಲಿ ನಿಂತು ಚರ್ಚಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯ ಪೀಠ ಸ್ಪಷ್ಟಪಡಿಸಿದೆ.
ದೇಶದ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ವರದಿಯನ್ನು ಪರಿಶೀಲನೆಗೆ ಒಳಪಡಿಸುವುದಿಲ್ಲ. ಆದರೆ, ಆ ವರದಿಯಲ್ಲಿ ತಮ್ಮ ಕುರಿತಾದ ಏನಾದರೂ ಅಂಶಗಳು ಇವೆ ಎಂದು ತಿಳಿಯಲು ಬಯಸುವ ವ್ಯಕ್ತಿಗಳಿಗೆ ಈ ಬಗ್ಗೆ ಮಾಹಿತಿ ನೀಡಬಹುದು ಎಂದು ಅದು ಹೇಳಿದೆ.
ಗೂಢಚರ್ಯೆ ತಂತ್ರಾಂಶ 'ಸ್ಪೈ ವೇರ್' ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುವ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯ ನೀಡಿದೆ.
ಗೂಢಚರ್ಯೆ ತಂತ್ರಾಂಶ 'ಸ್ಪೈ ವೇರ್' ಬಳಸಿ ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಮೇಲೆ ಕಾನೂನು ಬಾಹಿರವಾಗಿ ಕಣ್ಗಾವಲು ಇರಿಸಲಾಗಿತ್ತು ಎಂಬ ಆರೋಪವು 2021 ರಲ್ಲಿ ಕೇಳಿ ಬಂದಿತ್ತು.