
ಫೇಕ್ ಜಾತಿ ಸರ್ಟಿಫಿಕೇಟ್ ಬಳಸಿ ಸೌಲಭ್ಯ ಪಡೆಯಲು ಯತ್ನಿಸಿದರೂ ಶಿಕ್ಷಾರ್ಹ ಅಪರಾಧ: ಕರ್ನಾಟಕ ಹೈಕೋರ್ಟ್
ಫೇಕ್ ಜಾತಿ ಸರ್ಟಿಫಿಕೇಟ್ ಬಳಸಿ ಸೌಲಭ್ಯ ಪಡೆಯಲು ಯತ್ನಿಸಿದರೂ ಶಿಕ್ಷಾರ್ಹ ಅಪರಾಧ: ಕರ್ನಾಟಕ ಹೈಕೋರ್ಟ್
ನಕಲಿ ಜಾತಿ ಪ್ರಮಾಣಪತ್ರದ ಮೂಲಕ ಸೌಲಭ್ಯ ಪಡೆಯುವ ಯತ್ನವೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಆದಿ ದ್ರಾವಿಡ ಎಂದು ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಆರೋಪದಿಂದ ಮುಕ್ತಗೊಳಿಸುವಂತೆ ಕೋರಿ ಕ್ರಿಶ್ಚಿಯನ್ ಮಹಿಳೆ ಸುಮಲತಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಸುಮಲತಾ ಅವರು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದರು. ಅದರ ಆಧಾರದ ಮೇಲೆ ಅವರು ಸಾಯಿರಾ ಭಾನು ಎಂಬವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ ಅಡಿ ದೂರು ದಾಖಲಿಸಿದ್ದರು.
ಈ ದೂರನ್ನು ದಾಖಲಿಸಲು ಸುಮಲತಾ ಅರ್ಹರಾಗಿಲ್ಲ. ಅವರು ಕಾಯ್ದೆಯನ್ನು ದುರ್ಬಳಕೆ ಮಾಡಿದ್ಧಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಅವರು ತಮ್ಮ ನಕಲಿ ಜಾತಿ ಸರ್ಟಿಫಿಕೇಟ್‌ನಿಂದ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಶಾಸನಬದ್ಧವಾಗಿ ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಸಿಗಬೇಕಿರುವ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ನಕಲಿ ಜಾತಿ ಪ್ರಮಾಣಪತ್ರದ ಮೂಲಕ ಸೌಲಭ್ಯ ಪಡೆಯುವ ಯತ್ನವೂ ಶಿಕ್ಷಾರ್ಹ ಅಪರಾಧವಾಗಿದೆ. ಸದ್ರಿ ಪ್ರಕರಣದಲ್ಲಿ ಸುಮಲತಾ ಅವಿರುದ್ಧ ಪ್ರಕ್ರಿಯೆ ಮುಂದುವರಿಸಲು ಮೇಲ್ನೋಟಕ್ಕೆ ದಾಖಲೆಗಳು ಇವೆ. ಈ ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಸುಮಲತಾ ಅವರ ಆರೋಪ ವಜಾ ಕೋರಿರುವ ಅರ್ಜಿ ವಜಾಗೊಳಿಸಿರುವುದು ಸರಿಯಾಗಿದೆ ಎಂದು ನ್ಯಾಯಪೀಠ ತೀರ್ಮಾನಿಸಿತು.
ಡಿಸಿಆರ್‌ಇಗಳು ಪೊಲೀಸ್ ಠಾಣೆಗಳಲ್ಲ. ಅವರು ಸಲ್ಲಿಸಿರುವ ಆರೋಪ ಪಟ್ಟಿ ಕಾನೂನು ಸಿಂಧುತ್ವ ಹೊಂದಿಲ್ಲ ಮತ್ತು ಊರ್ಜಿತವಾಗುವುದಿಲ್ಲ. ಕಾಯ್ದೆ ಸೆಕ್ಷನ್ 2(e)(c) ಅಡಿ ಸಂತ್ರಸ್ತರು ಎಸ್‌ಸಿ/ಎಸ್‌ಟಿ ಜಾತಿಗೆ ಸೇರಿರಬೇಕು. ಆದರೆ, ದೂರುದಾರೆಯು ಸಂತ್ರಸ್ತರ ವ್ಯಾಪ್ತಿಗೆ ಬಾರದೇ ಇರುವುದರಿಂದ ಆರೋಪಪಟ್ಟಿ ಊರ್ಜಿತವಾಗುವುದಿಲ್ಲ ಎಂದು ಸುಮಲತಾ ವಾದ ಮಂಡಿಸಿದ್ದರು.
ಪ್ರಕರಣದ ವಿವರ:
ಸುಮಲತಾ ಅವರು ಜಮೀನು ಒತ್ತುವರಿ ಮಾಡಿ ಆ ಜಮೀನಿನಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಯಾವುದೇ ಪರವಾನಿಗೆ ಪಡೆಯದೆ ಮತ್ತು ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಒಪ್ಪಿಗೆ ಪತ್ರ ಪಡೆಯದೆ ನಿರ್ಮಿಸಿದ್ದರು. ಈ ಬಗ್ಗೆ ಸಾಯಿರಾ ಬಾನು ಎಂಬವರು ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಆದೇಶ ಮಾಡಿದ್ದನ್ನು ಸಹಿಸದೆ ಸಾಹಿರಾ ಬಾನು ಮತ್ತು ಅವರ ಸಹೋದರ ನೂರ್ ಮೊಹಮ್ಮದ್ ಅಲಿ ಅವರ ಮೇಲೆ ಸುಮಲತಾ ಅವರು ಗೂಂಡಾಗಳ ಮೂಲಕ ಹಲ್ಲೆ ನಡೆಸಿದ್ದರು.
ಸುಮಲತಾ ಅವರು ಜನ್ಮತಃ ಹಿಂದೂ ಆಗಿದ್ದರು. ಬಾಲ್ಯದಲ್ಲೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬ್ಯಾಪ್ಟಿಸ್ಟ್ ಪಂಥಕ್ಕೆ ಸೇರಿದ ಅವರು ಕ್ರೈಸ್ತ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿರುವುದರಿಂದ ಆಕೆ ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂದು ಸಾಯಿರಾ ಬಾನು ವಾದಿಸಿದ್ದರು.
ಪರಿಶಿಷ್ಟ ಜಾತಿಗೆ ಸೇರದೇ ಇದ್ದರೂ ಅವರು ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದಾಗಿ ನಕಲಿ ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಈ ಜಾತಿ ಪ್ರಮಾಣಪತ್ರವನ್ನು ಬಳಸಿಕೊಂಡು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎಂದು ಸಾಯಿರಾ ಬಾನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶಕರು (ಡಿಸಿಆರ್‌ಇ) ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಮಲತಾ ಅವರ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಮತ್ತು ಅಸಲಿಯತ್ತು ಬಗ್ಗೆ ಪ್ರಶ್ನೆ ಎದ್ದಿತ್ತು.