
ಗಂಡನಿದ್ದರೂ ಎರಡನೇ ಮದುವೆ: ಮಹಿಳೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಗಂಡನಿದ್ದರೂ ಎರಡನೇ ಮದುವೆ: ಮಹಿಳೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಗಂಡನಿದ್ದರೂ ಎರಡನೇ ಮದುವೆಯಾದ ಮಹಿಳೆಗೆ ಹೊಸಪೇಟೆಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹೊಸಪೇಟೆ ನಗರದ ಟಿಬಿ ಡ್ಯಾಮ್ ನ ದೇವಿಕಾ ಎಂಬ ಮಹಿಳೆ ಶಿಕ್ಷೆಗೊಳಗಾದವರು. ಆಕೆ ತನ್ನ ಪತಿ ಮತ್ತು ಇಬ್ಬರು ಮಕ್ಕಳಿದ್ದರೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಅಂಬರೀಶ್ ಎಂಬುವರೊಂದಿಗೆ 2014ರ ಜನವರಿ 25ರಂದು ಮದುವೆಯಾಗಿದ್ದರು.
ಅಲ್ಲದೆ 2014ರ ಮಾರ್ಚ್ ಆರರಂದು ಬಾಲ್ಕಿ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವನ್ನು ನೋಂದಣಿ ಕೂಡ ಮಾಡಿಸಲಾಗಿತ್ತು. ಈ ಕುರಿತು ಟಿ ಬಿ ಡ್ಯಾಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಎಎಸ್‌ಐ ಜಿ. ಟಿ. ನಾಗರಾಜ ಮತ್ತು ಪೊಲೀಸ್ ಕಾನ್ಸ್ಟೇಬಲ್ ಗಳಾದ ವಸಂತಕುಮಾರ ಯರಿಸ್ವಾಮಿಯವರು ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಶೋಕ್ ಆರ್ ಎಚ್ ಅವರು ದೇವಿಕಾ ಅಪರಾಧ ಎಸಗಿರುವುದು ಋಜುವಾಗಿದೆ ಎಂದು ತೀರ್ಮಾನಿಸಿ ಐಪಿಸಿ ಕಲಂ 494ರ ಅಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಮತ್ತು 5,000 ದಂಡ ವಿಧಿಸಿದ್ದಾರೆ.
ದಂಡ ಕಟ್ಟಲು ವಿಫಲರಾದರೆ ಒಂದು ತಿಂಗಳು ಜೈಲು ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಪ್ರಕರಣದ ಇನ್ನುಳಿದ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿಲ್ಲ. ಹಾಗಾಗಿ ಉಳಿದವರನ್ನು ಪ್ರಕರಣದಿಂದ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ ಟಿ ರೇವಣ ಸಿದ್ದಪ್ಪ ಅವರು ವಾದ ಮಂಡಿಸಿದ್ದರು.