-->
ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಹೆಚ್ಚಳ: 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿ ಕೆಎಟಿ ಮಹತ್ವದ ಆದೇಶ

ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಹೆಚ್ಚಳ: 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿ ಕೆಎಟಿ ಮಹತ್ವದ ಆದೇಶ

ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಹೆಚ್ಚಳ: 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿ ಕೆಎಟಿ ಮಹತ್ವದ ಆದೇಶ





ರಾಜ್ಯ ಸರಕಾರ ಸರಕಾರಿ ನೇಮಕಾತಿಗಳಲ್ಲಿ ಮಾಡಲಾದ ಮೀಸಲು ಪ್ರಮಾಣವನ್ನು ಶೇಕಡ 50 ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಆಧರಿಸಿ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ 2024ರ ಫೆಬ್ರವರಿ 26ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ರದ್ದುಪಡಿಸಿ ಮಹತ್ವದ ಆದೇಶ ಹೊರಡಿಸಿದೆ.


ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಪ್ರಶ್ನಿಸಿ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ ಎನ್ ಮಧು ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಆರ್. ಬಿ. ಬೂದಿಹಾಳ್ ಹಾಗೂ ಆಡಳಿತ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಇದೇ ವೇಳೆ, ಕರ್ನಾಟಕ ಆಡಳಿತಾತ್ಮಕ ಸೇವೆಗಳ ಖಾಲಿ ಇರುವ ಹುದ್ದೆಗಳ ಬರ್ತಿಗೆ ಸರಕಾರ ಮೀಸಲು ಹೆಚ್ಚಳ ಮಾಡಿ 2022ರ ಡಿಸೆಂಬರ್ 12 ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಕೆಎಟಿ ರದ್ದುಪಡಿಸಿದೆ. ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಕರ್ನಾಟಕ ಲೋಕಸೇವಾ ಆಯೋಗ ಸ್ವತಂತ್ರವಿದೆ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.


ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಈಗಾಗಲೇ ಮುಖ್ಯ ಪರೀಕ್ಷೆ ನಡೆದಿದೆ. ಫಲಿತಾಂಶ ಪ್ರಕಟ ಆಗಬೇಕಿದ್ದ ಈ ಹಂತದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಹೊರಡಿಸಿರುವ ಆದೇಶವು ಅಭ್ಯರ್ಥಿಗಳಿಗೆ ಸಂಕಷ್ಟವನ್ನು ತಂದಿದೆ.


ಸರಕಾರ ಕೈಗೊಳ್ಳುವ ಮುಂದಿನ ನಿರ್ಧಾರದ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದೆ ಸರಕಾರ ಇದೀಗ ನೇಮಕ ಪ್ರಕ್ರಿಯೆಯನ್ನು ಕಾನೂನು ಬದ್ಧ ಮಾಡಬೇಕಿದ್ದರೆ ಕೆಎಟಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ.


ಘಟನೆಯ ವಿವರ:

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರಕಾರ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು.


ಈ ಸುಗ್ರೀವಾಜ್ಞೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇಕಡ 18ರಿಂದ ಶೇಕಡ 24ಕ್ಕೆ ಹೆಚ್ಚಳ ಮಾಡಿತು. ಈ ಹೆಚ್ಚಳದ ಆಧಾರದ ಮೇಲೆ 384 ಗ್ರೂಪ್ ಎ ಮತ್ತು ಬಿ ಗಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, 2022ರ ಆಗಸ್ಟ್ 23ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ಮೀಸಲು ಪ್ರಮಾಣವನ್ನು ಶೇಕಡಾ 50 ರಿಂದ ಶೇಕಡ 56ಕ್ಕೆ ಹೆಚ್ಚಳ ಮಾಡಿದೆ. ಅದನ್ನು ಆಧರಿಸಿ 2022ರ ಡಿಸೆಂಬರ್ 28ರಂದು ಸರಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಶಾಸನ ಸಭೆಯ ಅನುಮತಿ ಪಡೆದಿಲ್ಲ. ಹಾಗಾಗಿ ಅದರ ಆಧಾರದ ಮೇಲೆ ರಚಿಸಲಾದ 2023ರ ನಿಯಮಾವಳಿ ರಚನೆ ಊರ್ಜಿತವಲ್ಲ ಎಂದು ಅಭಿಪ್ರಾಯ ಪಟ್ಟಿತು.


"ಇಂದಿರಾ ಸಹಾನಿ Vs ಭಾರತ ಸರ್ಕಾರ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ, ಒಟ್ಟು ಮೀಸಲು ಪ್ರಮಾಣ ಶೇಕಡ 50ರಷ್ಟು ಮೀರುವಂತಿಲ್ಲ. ಆದರೂ ಕೆಲವು ರಾಜ್ಯಗಳು ಶೇಕಡಾ 50ನ್ನು ಮೀರಿ ನೇಮಕಾತಿ ಮಾಡಿಕೊಂಡಿವೆ ಎಂಬುದನ್ನು ಮುಂದಿಟ್ಟುಕೊಂಡು ಮೀಸಲು ಮಿತಿ ಹೆಚ್ಚಳ ಮಾಡಿದೆ. ಇದಕ್ಕೆ ಯಾವುದೇ ಶಾಸನತ್ಮಕ ಬೆಂಬಲ ಇಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ತನ್ನ ಮಹತ್ವದ ತೀರ್ಪಿನಲ್ಲಿ ವಿವರಿಸಿದೆ.


ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ರಾಜಕೀಯ ಕಾರಣಕ್ಕಾಗಿ ಸರಕಾರ ಮೀಸಲು ಪ್ರಮಾಣವನ್ನು ಶೇಕಡಾ 56ಕ್ಕೆ ಹೆಚ್ಚಿಸಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇಕಡ 44 ರಷ್ಟು ಮಾತ್ರ ಅವಕಾಶ ಸಿಗಲಿದೆ. ಅವರಿಗೆ ಲಭಿಸಬೇಕಾಗಿರುವ ಉದ್ಯೋಗದ ಅವಕಾಶ ಕಸಿದುಕೊಳ್ಳಲಾಗಿದೆ. ಇದು ಸಂವಿಧಾನ ವಿರೋಧಿ ಮತ್ತು ಸುಪ್ರೀಂ ಕೋರ್ಟ್ ನ ತೀರ್ಪಿನ ಉಲ್ಲಂಘನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.


ಎಂ.ಆರ್. ಬಾಲಾಜಿ Vs ಮೈಸೂರು ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಮೀಸಲಿಗೆ ಮಿತಿ ಇರಬೇಕು ಎಂಬ ತೀರ್ಪಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.


ಅರ್ಜಿದಾರರ ಪರ ಮಂಡಿಸಲಾದ ವಾದವನ್ನು ಆಕ್ಷೇಪಿಸಿದ ಸರಕಾರಿ ವಕೀಲರು, ಕರ್ನಾಟಕ ಶಾಸನಸಭೆ ರೂಪಿಸಿದ ಕಾಯ್ದೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಇದಕ್ಕೆ ಮಾನ್ಯತೆ ಇಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಖಚಿತಪಡಿಸಿಕೊಂಡು ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಆಯೋಗದ ಶಿಫಾರಸಿದಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಆಯೋಗ ವೈಜ್ಞಾನಿಕ ವರದಿ ನೀಡಿದೆ. ಈಗಾಗಲೇ ಹಲವು ರಾಜ್ಯಗಳು ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಪ್ರಮಾಣವನ್ನು ವಿಸ್ತರಿಸಲಾಗಿದ್ದು, ಸದ್ರಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.


ಮಧು ಬಿ.ಎನ್. Vs ಕರ್ನಾಟಕ ರಾಜ್ಯ

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ, Appl No. 2144/2024 Dated 28-05-2025




Ads on article

Advertise in articles 1

advertising articles 2

Advertise under the article