
ಶಾಲೆಗೆ ಬಣ್ಣ ಬಳಿಯಲು ರೂ. 4,700 ಬೆಲೆಯ 24 ಲೀಟರ್ ಪೈಂಟ್: ಗುತ್ತಿಗೆದಾರನ 3.5 ಲಕ್ಷ ರೂ. ಬಿಲ್ ಪಾಸ್ ಮಾಡಿದ ಇಲಾಖೆ- ಬಿಲ್ ವೈರಲ್ ಆದ ಬಳಿಕ ತನಿಖೆಗೆ ಆದೇಶ
ಶಾಲೆಗೆ ಬಣ್ಣ ಬಳಿಯಲು ರೂ. 4,700 ಬೆಲೆಯ 24 ಲೀಟರ್ ಪೈಂಟ್: ಗುತ್ತಿಗೆದಾರನ 3.5 ಲಕ್ಷ ರೂ. ಬಿಲ್ ಪಾಸ್ ಮಾಡಿದ ಇಲಾಖೆ- ಬಿಲ್ ವೈರಲ್ ಆದ ಬಳಿಕ ತನಿಖೆಗೆ ಆದೇಶ
ಎರಡು ಶಾಲಾ ಕಟ್ಟಡಗಳಿಗೆ 24 ಲೀಟರ್ ಬಣ್ಣ ಬಳಿಯಲು ವೆಚ್ಚ ಮಾಡಿದ್ದು ಬರೋಬ್ಬರಿ ರೂ. 3,38,000/-. ಈ ಪೈಂಟಿಂಗ್ ಕಾರ್ಯಕ್ಕೆ ಬರೋಬ್ಬರಿ 443 ಕೂಲಿಗಳನ್ನು ಬಳಸಿಕೊಂಡಿದ್ದು, ಶಿಕ್ಷಣ ಇಲಾಖೆ ಹಿಂದೆ-ಮುಂದೆ ನೋಡದೆ ಈ ಬಿಲ್‌ನ್ನು ಪಾಸ್ ಮಾಡಿ ಗುತ್ತಿಗೆದಾರನಿಗೆ ಹಣ ಪಾವತಿಯನ್ನೂ ಮಾಡಿದೆ.
ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾದ ಇಂತಹ ಅದ್ಭುತ ಕಾಮಗಾರಿ ನಡೆದದ್ದು ಮಧ್ಯ ಪ್ರದೇಶದಲ್ಲಿ. ಇಲ್ಲಿನ ಜಿಲ್ಲೆಯೊಂದರ ಎರಡು ಶಾಲೆಯಲ್ಲಿ ಬಣ್ಣ ಬಳಿಯುವ ಕಾಮಗಾರಿಯ ಈ ಹಗರಣ ಬೆಳಕಿಗೆ ಬಂದದ್ದು ಕಾಮಗಾರಿಯ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೇಲೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಣಾಧಿಕಾರಿಗಳು ಹಗರಣದ ತನಿಖೆಗೆ ಮುಂದಾಗಿದ್ದಾರೆ. ಮಾಧ್ಯಮದ ವರದಿಗಾರರು ಈ ಬಗ್ಗೆ ಪ್ರಶ್ನಿಸಲು ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಲು ಮುಂದಾದಾಗ, ಅವರು ಸ್ಥಳದಿಂದಲೇ ಪಲಾಯನ ಮಾಡಿದ್ದಾರೆ.
ಎರಡು ಶಾಲೆಗಳಿಗೆ ಬಣ್ಣ ಬಳಿಯಲು 215 ಮೇಸ್ತ್ರಿಗಳು ಹಾಗೂ 443 ಕೂಲಿಯಳುಗಳನ್ನು ಬಳಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ವೈರಲ್ ಆದ ಬಿಲ್ಲು ನೀಡುತ್ತಿದೆ. ಆದರೆ, ಎರಡು ಶಾಲೆಗಳಿಗೆ ಬಣ್ಣ ಹಚ್ಚಲು ಕೇವಲ 24 ಲೀಟರ್ ಪೈಂಟ್ ಮಾತ್ರ ಬಳಕೆಯಾಗಿದೆ. ಇಷ್ಟು ಬಣ್ಣಕ್ಕೆ ತಗುಲಿದ ವೆಚ್ಚ ಕೇವಲ ರೂ. 4704/- ಮಾಥ್ರ.
ಈ ಪೈಕಿ ಮೊದಲನೇ ಶಾಲೆಯಲ್ಲಿ ರೂ. 1,06,984 ಬಿಲ್ ಮಾಡಲಾಗಿದೆ. ಈ ಕಾಮಗಾರಿಯಲ್ಲಿ 168 ಕೂಲಿ ಆಳುಗಳು 65 ಮೇಸ್ತ್ರಿಗಳನ್ನು ಬಳಸಲಾಗಿದೆ. ನಾಲ್ಕು ಲೀಟರ್ ಪೈಂಟ್ ವ್ಯಯ ಮಾಡಲಾಗಿದೆ.
ಎರಡನೇ ಶಾಲೆಯಲ್ಲಿ 20 ಲೀಟರ್ ಬಣ್ಣ ಬಳಕೆ ಮಾಡಿ 150 ಮೇಸ್ತ್ರಿಗಳು ಹಾಗೂ 275 ಕೂಲಿಯಾಳುಗಳ ವೆಚ್ಚವನ್ನು ತೋರಿಸಿ 2,31,650/- ರೂ.ಗಳನ್ನು ಖರ್ಚು ಮಾಡಲಾಗಿದೆ.
ಎರಡು ಬಣ್ಣ ಬಳಿಯುವ ಗುತ್ತಿಗೆಯನ್ನು ವಹಿಸಿಕೊಂಡವನು ಒಬ್ಬನೇ ಮಹಾನ್ ಗುತ್ತಿಗೆದಾರ ಆತನ ಹೆಸರು ಸುಧಾಕರ್. ಈ ಎರಡು ಬಿಲ್ಲುಗಳನ್ನು ಮೇ 18, 2025ರಂದು ಪಾವತಿ ಮಾಡಲಾಗಿದೆ. ಪಾಸ್ ಮಾಡಲಾದ ಈ ಬಿಲ್ಲುಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಇದೆ.