.jpg)
ನೌಕರನ ತಪ್ಪಿಲ್ಲದೆ ಬಡ್ತಿ ನಿರಾಕರಣೆ ಅಥವಾ ವಿಳಂಬ: ಪರಿಹಾರ ನೀಡಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನೌಕರನ ತಪ್ಪಿಲ್ಲದೆ ಬಡ್ತಿ ನಿರಾಕರಣೆ ಅಥವಾ ವಿಳಂಬ: ಪರಿಹಾರ ನೀಡಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನೌಕರನ ತಪ್ಪಿಲ್ಲದೇ ಬಡ್ತಿಯನ್ನು ನಿರಾಕರಿಸಿದರೆ ಅಥವಾ ವಿಳಂಬ ಮಾಡಿದರೆ ಬಡ್ತಿಗೆ ಅರ್ಹನಾದ ದಿನಾಂಕದಿಂದ ಪೂರ್ವಾನ್ವಯವಾಗಿ ಬಡ್ತಿ ಹಾಗೂ ಸಂಬಂಧಿತ ಆರ್ಥಿಕ ಸವಲತ್ತುಗಳನ್ನು ನೀಡತಕ್ಕದ್ದು ಎಂದು ಮಾನ್ಯ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉದ್ಯೋಗದಾತನು ಉದ್ಯೋಗಿಯ ಕಡೆಯಿಂದ ಯಾವುದೇ ತಪ್ಪಿಲ್ಲದೆ ಆತನ ಬಡ್ತಿಯನ್ನು ವಿಳಂಬ ಮಾಡಿದರೆ ಆ ಉದ್ಯೋಗಿಗೆ ವೇತನ ಮತ್ತು ಭತ್ಯೆಗಳ ಬಾಕಿಯೊಂದಿಗೆ ಪೂರ್ವಾನ್ವಯ ಬಡ್ತಿ ಪಡೆಯುವ ಅರ್ಹತೆ ಇರುತ್ತದೆ ಎಂದು ಈ ತೀರ್ಪು ಹೇಳಿದೆ.
"ಪಿ. ಶಕ್ತಿ ವಿರುದ್ಧ ತಮಿಳುನಾಡು ಸರಕಾರ ಮತ್ತಿತರರು" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸುಧಾಂಶು ಧುಲಿಯ ಮತ್ತು ಶ್ರೀ ಕೆ. ವಿನೋದ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ದಿನಾಂಕ 2.5.2025 ರಂದು ಮಹತ್ವದ ತೀರ್ಪು ನೀಡಿದೆ.
ತಮಿಳುನಾಡು ರಾಜ್ಯ ಸರಕಾರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿ. ಶಕ್ತಿ ಎಂಬವರು ತನಗೆ ಬಡ್ತಿಯನ್ನು ಅನ್ಯಾಯವಾಗಿ ನಿರಾಕರಿಸಿದ್ದು ಅರ್ಹತಾ ದಿನಾಂಕದಿಂದ ಪೂರ್ವಾನ್ವಯವಾಗಿ ಪದೋನ್ನತಿ ನೀಡಬೇಕು ಹಾಗೂ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ಈ ತೀರ್ಪಿನ ಸಾರಾಂಶ ಹೀಗಿದೆ.
ಮೂಲಭೂತವಾಗಿ ಉದ್ಯೋಗಿಯನ್ನು ಬಡ್ತಿಗೆ ಅರ್ಹತಾ ದಿನಾಂಕದಂದು ಬಡ್ತಿ ಪಡೆದಂತೆ ಪರಿಗಣಿಸಲಾಗುತ್ತದೆ ಮತ್ತು ಮಧ್ಯಂತರ ಅವಧಿಗೆ ಅನುಗುಣವಾದ ಸಂಬಳ ಮತ್ತು ಇತರ ವೇತನ ಭತ್ಯೆಗಳ ಪ್ರಯೋಜನವನ್ನು ನೀಡಲಾಗುತ್ತದೆ.
ಇಲ್ಲಿ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಬಡ್ತಿಯಲ್ಲಿನ ವಿಳಂಬವು ಕೇವಲ ಉದ್ಯೋಗದಾತರ ತಪ್ಪು ಅಥವಾ ಆಡಳಿತಾತ್ಮಕ ದೋಷದಿಂದಾಗಿರಬೇಕು. ಉದ್ಯೋಗಿಯು ಪದೋನ್ನತಿಗೆ ಅರ್ಹನಾಗಿದ್ದು ಆತನ ವಿರುದ್ಧ ಯಾವುದೇ ದೋಷಾರೋಪಣೆ ಇರಬಾರದು. ಪೂರ್ವಾನ್ವಯ ಬಡ್ತಿಯ ಸಂದರ್ಭಗಳಲ್ಲಿ ನಿಜವಾಗಿಯೂ ಬಡ್ತಿ ನೀಡಿದ ದಿನಾಂಕವನ್ನು ಪರಿಗಣಿಸದೆ ಆತನು ಬಡ್ತಿಗೆ ಅರ್ಹನಾಗಿದ್ದ ದಿನಾಂಕದಿಂದ ಬಡ್ತಿಯನ್ನು ನೀಡಲಾಗುತ್ತದೆ.
ಈ ಪೂರ್ವಾನ್ವಯ ಬಡ್ತಿಯು ಎಲ್ಲಾ ಹಣಕಾಸಿನ ಪ್ರಯೋಜನಗಳೊಂದಿಗೆ ಸಿಗುತ್ತದೆ. ಇದರಲ್ಲಿ ನಿಗದಿತ ದಿನಾಂಕದಂದು ಬಡ್ತಿ ಪಡೆದಿದ್ದರೆ ಉದ್ಯೋಗಿಯು ಪಡೆಯುತ್ತಿದ್ದ ವೇತನ ಮತ್ತು ಭತ್ಯೆಗಳ ಬಾಕಿ ಸೇರಿವೆ. ಈ ತತ್ವವು ನ್ಯಾಯ ಮತ್ತು ಸಮಾನತೆಯ ಕಲ್ಪನೆಯನ್ನು ಆಧರಿಸಿದೆ. ಉದ್ಯೋಗಿಗಳು ತಮ್ಮ ಉದ್ಯೋಗದಾತರಿಂದ ಉಂಟಾಗುವ ವಿಳಂಬಗಳಿಗೆ ಶಿಕ್ಷೆಗೊಳಪಡಬಾರದು ಎಂಬುದನ್ನು ಖಚಿತಪಡಿಸುತ್ತದೆ.
"ಭಾರತ ಒಕ್ಕೂಟ ವಿರುದ್ಧ ಎಂ. ಸಿ. ಮುರಳಿ" ಮತ್ತು "ಸುನೈನಾ ಶರ್ಮ ವಿರುದ್ಧ ಜಮ್ಮ ಮತ್ತು ಕಾಶ್ಮೀರ ರಾಜ್ಯ" ಈ ಪ್ರಕರಣಗಳಲ್ಲಿ ನಿಯಮಗಳು ಅನುಮತಿಸದಿದ್ದಾಗ ಅಥವಾ ಉದ್ಯೋಗಿ ಬಡ್ತಿ ಹುದ್ದೆಯಲ್ಲಿನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳದಿದ್ದಾಗ ಪೂರ್ವಾನ್ವಯ ಬಡ್ತಿ ನಿರಾಕರಿಸಲಾಗಿತ್ತು.
ಇದಕ್ಕೆ ವಿರುದ್ಧವಾಗಿ "ರಮೇಶ್ ಕುಮಾರ್ ವಿರುದ್ಧ ಭಾರತ ಸರಕಾರ" ಮತ್ತಿತರರು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೂರ್ವಾನ್ವಯ ಬಡ್ತಿಯ ಅನಿವಾರ್ಯತೆಯನ್ನು ಎತ್ತಿ ಹಿಡಿದಿದೆ.
ಸಾಮಾನ್ಯವಾಗಿ ವಿಳಂಬವಾಗಿ ಪದೋನ್ನತಿ ನೀಡಿದ ಪ್ರಕರಣಗಳಲ್ಲಿ ನೌಕರರಿಗೆ ಕಾಲ್ಪನಿಕ ಬಡ್ತಿಯನ್ನು ನೀಡಲಾಗುತ್ತದೆ. ಅವರಿಗೆ ಸಂಬಂಧಿಸದ ಕಾರಣಗಳಿಂದ ವಿಳಂಬವಾದರೆ ಹಣಕಾಸಿನ ಪ್ರಯೋಜನವನ್ನು ನೀಡದೆ ಸೇವಾ ಹಿರಿತನವನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ.
ಬಡ್ತಿಯನ್ನು ಅನ್ಯಾಯವಾಗಿ ನಿರಾಕರಿಸಿದರೆ ಅಥವಾ ರದ್ದುಗೊಳಿಸಿದರೆ ನೌಕರರು ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ನ್ಯಾಯಾಲಯದಲ್ಲಿ ತಮ್ಮ ಹಕ್ಕನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಬಹುದು.
ಹುದ್ದೆ ಅಥವಾ ವೇತನದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನೀಡಲಾಗುವ ಕಾಲ್ಪನಿಕ ಬಡ್ತಿಯು ಸರಕಾರಿ ನೌಕರನಿಗೆ ನ್ಯಾಯವಾಗಿ ಸಿಗತಕ್ಕ ಬಡ್ತಿಗೆ ಅನ್ವಯಿಸಲಾಗುವುದಿಲ್ಲ. ಓರ್ವ ನೌಕರ ಬಡ್ತಿಗೆ ಅರ್ಹನಾಗಿದ್ದರೆ ಆತನು ಸಂಬಂಧಿತ ಪ್ರಯೋಜನಗಳನ್ನು ಪೂರ್ವಾನ್ವಯವಾಗಿ ಪಡೆಯಬೇಕು ಎಂದು ಕೇರಳ ಹೈಕೋರ್ಟ್ ನಾರಾಯಣ ಮೆನನ್ ವಿರುದ್ಧ ಕೇರಳ ರಾಜ್ಯ ಈ ಪ್ರಕರಣದಲ್ಲಿ ತೀರ್ಪು ನೀಡಿದೆ.
"ಬಿಹಾರ ರಾಜ್ಯ ವಿದ್ಯುತ್ ಮಂಡಳಿ ವಿರುದ್ಧ ಧರ್ಮದೇವದಾಸ್" ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಬಡ್ತಿಗೆ ಪರಿಗಣಿಸಲ್ಪಡುವ ಹಕ್ಕು ಸಂವಿಧಾನದ ವಿಧಿ 14 ಮತ್ತು 16 (1) ಅಡಿಯಲ್ಲಿ ಮೂಲಭೂತ ಹಕ್ಕು ಆಗಿದೆ ಎಂದು ಹೇಳಿದೆ. ಇದು ಬಡ್ತಿಗೆ ಸ್ವಯಂ ಚಾಲಿತ ಹಕ್ಕನ್ನು ಒದಗಿಸದಿದ್ದರೂ ಅರ್ಹತೆಯ ಆಧಾರದ ಮೇಲೆ ಉದ್ಯೋಗಿಯನ್ನು ಪದೋನ್ನತಿಗೆ ಪರಿಗಣಿಸುವ ಅಗತ್ಯವನ್ನು ಎತ್ತಿ ಹಿಡಿದಿದೆ.
"ಶೇಕ್ ಮೆಹಬೂಬ್ ವಿರುದ್ಧ ರೈಲ್ವೆ ಮಂಡಳಿ ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ ರಾಮಾ ಜೋಯಿಸ್ ಅವರು ರಿಟ್ ಅರ್ಜಿ ಸಂಖ್ಯೆ 3014/1976 ರಲ್ಲಿ ದಿನಾಂಕ 1.9.1981 ರಂದು ತೀರ್ಪು ನೀಡಿದ್ದು ಪದೋನ್ನತಿಗೆ ಅರ್ಹನಾದ ದಿನಾಂಕದಿಂದ ಪೂರ್ವಾನ್ವಯವಾಗಿ ಸಲ್ಲತಕ್ಕ ಎಲ್ಲಾ ವೇತನ ಹಾಗೂ ಬತ್ತ್ಯೆಗಳನ್ನು ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದ್ದರು.
ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪಿನ ಬೆಳಕಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಡಿಪಿಆರ್ 3 ಐಪಿಪಿ 81 ದಿನಾಂಕ 26.9.1983 ಪ್ರಕಾರ ಆದೇಶ ಹೊರಡಿಸಿದ್ದು ಪೂರ್ವಾನ್ವಯ ಬಡ್ತಿಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಬಡ್ತಿ, ವೇತನ ಮತ್ತು ಪಿಂಚಣಿ ನಿಯಂತ್ರಣ) ಕಾಯ್ದೆ 1973 ರ ಸೆಕ್ಷನ್ 3 ರ ಪ್ರಕಾರ ಬಾಕಿ ವೇತನ ಹಾಗೂ ಬತ್ತೆಗಳನ್ನು ಪಡೆಯಲು ನೌಕರರು ಅರ್ಹರಾಗಿರುತ್ತಾರೆ. ಈ ಪ್ರಕರಣವು ಪೂರ್ವಾನ್ವಯ ಬಡ್ತಿಯ ನಂತರ ಬಾಕಿ ವೇತನಕ್ಕಾಗಿ ರೈಲ್ವೆ ಉದ್ಯೋಗಿಯ ಹಕ್ಕಿನ ಕುರಿತು ಸ್ಪಷ್ಟ ತೀರ್ಪು ನೀಡಿದೆ.
ನಿರ್ದಿಷ್ಟ ಸುತ್ತೋಲೆಯ ಆಧಾರದ ಮೇಲೆ ಹಿಂಬಾಕಿಗಳನ್ನು ನಿರಾಕರಿಸುವುದು ಸಂವಿಧಾನದ ವಿಧಿ 14 ಮತ್ತು 16 (1) ಅಡಿಯಲ್ಲಿ ಉದ್ಯೋಗಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದು ಮುಖ್ಯ ವಿಷಯವಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯವು ಹಿಂಬಾಕಿಗಳನ್ನು ನಿರಾಕರಿಸುವುದು ನ್ಯಾಯ ಸಮ್ಮತವಲ್ಲ ಮತ್ತು ಉದ್ಯೋಗದ ವಿಷಯಗಳಲ್ಲಿ ಉದ್ಯೋಗಿಯ ಸಮಾನತೆ ಮತ್ತು ಸಮಾನ ಅವಕಾಶದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ನಿಗದಿತ ದಿನಾಂಕಗಳಲ್ಲಿ ಬಡ್ತಿಗಾಗಿ ಪರಿಗಣಿಸುವ ಹಕ್ಕನ್ನು ಉದ್ಯೋಗಿ ಹೊಂದಿದ್ದಾರೆ ಮತ್ತು ಆ ಬಡ್ತಿಯ ಪ್ರಯೋಜನಗಳನ್ನು ನಿರಾಕರಿಸುವ ರೀತಿಯಲ್ಲಿ ಸುತ್ತೋಲೆಯನ್ನು ಅನ್ವಯಿಸಬಾರದು ಎಂದು ನ್ಯಾಯಾಲಯವು ಹೇಳಿದೆ.
ಮೂಲಭೂತವಾಗಿ ಈ ಪ್ರಕರಣವು ರೈಲ್ವೆ ಉದ್ಯೋಗಿಗಳಿಗೆ ವಿಶೇಷವಾಗಿ ಬಡ್ತಿ ಮತ್ತು ಸಂಬಳದ ಪ್ರಯೋಜನಗಳನ್ನು ನೀಡುವ ವಿಷಯಗಳಲ್ಲಿ ನ್ಯಾಯಯುತ ಮತ್ತು ಸಮಾನ ಅವಕಾಶವನ್ನು ಖಚಿತ ಪಡಿಸಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಕಚೇರಿಯಲ್ಲಿ ನೌಕರರ ನಡುವೆ ತಾರತಮ್ಯದ ವಿರುದ್ಧ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಲಯಗಳ ಪಾತ್ರವೇನು ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ.
ಉದ್ಯೋಗದಾತರ ನಿರ್ಲಕ್ಷ್ಯ, ದುರುದ್ದೇಶದಿಂದ ಬಡ್ತಿ ನಿರಾಕರಿಸಿದ್ದಲ್ಲಿ ಆರ್ಥಿಕ ಪ್ರಯೋಜನಗಳಿಗೆ ನೌಕರರು ಅರ್ಹರಾಗಿರುತ್ತಾರೆ. ಇದನ್ನು ಸಾಮಾನ್ಯವಾಗಿ ಕಾಲ್ಪನಿಕ ಬಡ್ತಿಯಾಗಿ ಅನುಗುಣವಾದ ಆರ್ಥಿಕ ಪ್ರಯೋಜನಗಳೊಂದಿಗೆ ನೀಡಲಾಗುತ್ತದೆ. ಇದರರ್ಥ ಉದ್ಯೋಗಿ ವಾಸ್ತವವಾಗಿ ಆ ಹುದ್ದೆಯಲ್ಲಿ ಕೆಲಸ ಮಾಡದಿದ್ದರೂ ಸಹ ಬಡ್ತಿಗೆ ಅರ್ಹರಾದ ದಿನಾಂಕದಿಂದ ಉನ್ನತ ಹುದ್ದೆಯ ಸಂಬಳ ಮತ್ತು ಭತ್ತೆಗಳಿಗೆ ಅರ್ಹರಾಗುತ್ತಾರೆ. ಇಲ್ಲಿ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಉದ್ಯೋಗಿಯ ಕಡೆಯಿಂದ ಯಾವುದೇ ತಪ್ಪು ಅಥವಾ ನಿರ್ಲಕ್ಷದಿಂದ ಬಡ್ತಿಯಲ್ಲಿ ವಿಳಂಬ ಉಂಟಾಗಿರಬಾರದು.
ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ ಗಳಲ್ಲಿರುವ ಹಲವಾರು ಪ್ರಕರಣಗಳಲ್ಲಿ ವಿಳಂಬವಾದ ಬಡ್ತಿಗೆ ಸಂಬಂಧಿಸಿದಂತೆ ಅರ್ಹತೆಯ ದಿನಾಂಕದಿಂದ ಹಣಕಾಸಿನ ಪ್ರಯೋಜನಗಳನ್ನು ನೀಡುವ ತತ್ವವನ್ನು ಎತ್ತಿ ಹಿಡಿದಿವೆ. ಆಡಳಿತದಲ್ಲಿ ದಕ್ಷತೆಯನ್ನು ಮೂಡಿಸಿ ನೌಕರರಿಗೆ ಸಕಾಲದಲ್ಲಿ ಪದೋನ್ನತಿ ನೀಡುವ ಕುರಿತು ಸಾಂವಿಧಾನಿಕ ನ್ಯಾಯಾಲಯಗಳು ನೀಡಿರುವ ತೀರ್ಪುಗಳಲ್ಲಿನ ನಿರ್ದೇಶನಗಳನ್ನು ಅರ್ಥೈಸಿ ಪಾಲಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ.
ಮಾಹಿತಿ/ಲೇಖನ: ಶ್ರೀ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದ.ಕ. ನ್ಯಾಯಾಂಗ ಇಲಾಖೆ