
ಉಚಿತ ಕಾನೂನು ನೆರವು ನೀಡದ ಕೋರ್ಟ್! ಪಾಟೀ ಸವಾಲು ನಡೆಸದೆ ಆರೋಪಿಗೆ ಶಿಕ್ಷೆ ಸರಿಯಾದ ಕ್ರಮವಲ್ಲ: ಕೋರ್ಟ್ ಶಿಕ್ಷೆ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಉಚಿತ ಕಾನೂನು ನೆರವು ನೀಡದ ಕೋರ್ಟ್! ಪಾಟೀ ಸವಾಲು ನಡೆಸದೆ ಆರೋಪಿಗೆ ಶಿಕ್ಷೆ ಸರಿಯಾದ ಕ್ರಮವಲ್ಲ: ಕೋರ್ಟ್ ಶಿಕ್ಷೆ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ವಿಚಾರಣಾ ನ್ಯಾಯಾಲಯವು ಅಗತ್ಯ ಸಂದರ್ಭದಲ್ಲಿ ಆರೋಪಿಗೆ ಉಚಿತ ಕಾನೂನು ನೆರವು ನೀಡಬೇಕು. ಪಾಟೀ ಸವಾಲು ನಡೆಸದೆ ಆರೋಪಿಗೆ ಕೋರ್ಟ್ ಶಿಕ್ಷೆ ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆ ರದ್ದುಪಡಿಸಿದೆ.
"ಸೋಮಶೇಖರ್ @ ಸೋಮ ವಿರುದ್ಧ ಕರ್ನಾಟಕ ರಾಜ್ಯ" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೋಕ್ಸೊ ಪ್ರಕರಣದಲ್ಲಿ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶದಿಂದ ಬಾಧಿತರಾದ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಾಕ್ಷಿಗಳ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಪರ ವಕೀಲರು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದಿದ್ದರೆ, ಅವರಿಗೆ ಉಚಿತ ಕಾನೂನು ನೆರವು ನೀಡುವ ಬಾಧ್ಯತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿದೆ. ಯಾವುದೇ ನಾಗರಿಕರೂ ನ್ಯಾಯ ಪಡೆಯುವ ಅವಕಾಶದಿಂದ ವಂಚಿತರಾಗುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸದ್ರಿ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾ ನ್ಯಾಯಾಲಯವು ಪಾಟೀ ಸವಾಲಿಗೆ ಅವಕಾಶ ನೀಡಿತ್ತು. ಆ ಸಂದರ್ಭದಲ್ಲಿ ಅವರ ಪರ ವಾದಿಸುತ್ತಿದ್ದ ವಕೀಲರು ಗೈರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್ 304ರ ಪ್ರಕಾರ, ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿತ್ತು. ಇಂತಹ ಸಂದರ್ಭದಲ್ಲಿ ಆರೋಪಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡುವ ಬಾಧ್ಯತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿತ್ತು ಎಂದು ನ್ಯಾಯಪೀಠ ಹೇಳಿದೆ.
ವಿಚಾರಣಾ ನ್ಯಾಯಾಲಯವು ಆರೋಪಿಗೆ ತನ್ನ ಪರ ಅಭಿರಕ್ಷೆ ನಡೆಸಲು ಉಚಿತ ಕಾನೂನು ನೆರವು ಕೊಡಬೇಕಿತ್ತು. ಆದರೆ, ವಿಚಾರಣಾ ನ್ಯಾಯಾಲಯ ಉಚಿತ ಕಾನೂನುನೆರವು ನೀಡಿಲ್ಲ. ಸಾಕ್ಷ್ಯಗಳ ಪಾಟೀ ಸವಾಲು ನಡೆಸದೆ ಶಿಕ್ಷೆ ವಿಧಿಸುವ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗೆ ನೀಡಲಾಗಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿತು. ಅರ್ಜಿದಾರರಿಗೆ ವಕೀಲರ ನೆರವು ನೀಡಬೇಕು ಮತ್ತು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಪ್ರಕರಣ: ಸೋಮಶೇಖರ್ @ ಸೋಮ ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, Crl.A. 328/2018 Dated 31-01-2022