ಮೃತ ನೌಕರನ ಸೋದರನಿಗೂ ಅನುಕಂಪದ ಉದ್ಯೋಗ: ಷರತ್ತು ವಿಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮೃತ ನೌಕರನ ಸೋದರನಿಗೂ ಅನುಕಂಪದ ಉದ್ಯೋಗ: ಷರತ್ತು ವಿಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಉದ್ಯೋಗಿಯ ಪತ್ನಿ ಉದ್ಯೋಗಿ ಸಾವನ್ನಪ್ಪುವ ಮೊದಲೇ ಮರಣ ಹೊಂದಿದ್ದರೆ ಮತ್ತು ಆ ದಂಪತಿಗೆ ಮಕ್ಕಳಿಲ್ಲದಿದ್ದರೆ ಮೃತ ವ್ಯಕ್ತಿಯ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಮೃತ ನೌಕರನ ತಾಯಿಯನ್ನು ಆರೈಕೆ ಮಾಡುವ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಆದೇಶಿಸುವಂತೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಒಂದೊಮ್ಮೆ ತಾಯಿಯನ್ನು ಆರೈಕೆ ಮಾಡದೇ ಹೋದರೆ ಈ ಆದೇಶವನ್ನು ರದ್ದುಪಡಿಸುವಂತೆ ಕೋರಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಬಳ್ಳಾರಿ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಅರ್‌ಟಿಸಿ) ಹೊರಡಿಸಿದ ಅನುಮೋದನೆ ರದ್ದು ಕೋರಿ ಸಂಸ್ಥೆಯಲ್ಲಿ ನೌಕರನಾಗಿದ್ದ ವೀರೇಶ್ ಮಂತಪ್ಪ ಲೋಲಾಸರ್ ಅವರ ತಾಯಿ, ಸಹೋದರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜು ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.
ಮೃತ ನೌಕರ ವೀರೇಶ್ ಅವರ ಪತ್ನಿ ನೌಕರ ಮೃತಪಡುವ ಮೊದಲೇ ಸಾವನ್ನಪ್ಪಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ವೀರೇಶ್ಅವರ ಸಹೋದರ ಅರ್ಜಿದಾರರ 'ಕುಟುಂಬವನ್ನು ಸಲಹುತ್ತಿದ್ದರು. ಈ ಎಲ್ಲ ಅಂಶ ಪರಿಗಣಿಸಿ ಅರ್ಜಿ ಮಾನ್ಯ ಮಾಡುವಂತೆ ಕೋರಿದರು.
ಅನುಕಂಪದ ಆಧಾರದಲ್ಲಿ ಮೃತ ನೌಕರನ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದರ ಮೂಲ ಉದ್ದೇಶವೇ ಸರ್ಕಾರಿ ನೌಕರನ ನಿಧನದ ನಂತರ ಆತನ ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು. ಈ ಪ್ರಕರಣದಲ್ಲಿ ನಿಗಮವು ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದನ್ನು ನಿರಾಕರಿಸುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, ಆದರೆ, ಮೃತ ನೌಕರ ವೀರೇಶ್ ಮದುವೆಯಾಗಿರುವ ಕಾರಣ ಆತನ ಸಹೋದರ ಸಂಗಣ್ಣ ಅವರಿಗೆ ಉದ್ಯೋಗ ನೀಡಲು ಅಡ್ಡಿಯಾಗಿದೆ ಎಂದು ಹೇಳುತ್ತಿರುವುದಾಗಿ ಆದೇಶದಲ್ಲಿ ವಿವರಿಸಲಾಗಿದೆ.
ಮೃತ ವ್ಯಕ್ತಿ ಮದುವೆಯಾಗಿದ್ದರು. ನಿಯಮದ ಅನ್ವಯ ಮೃತರ ಪತ್ನಿ ಮತ್ತು ಮಕ್ಕಳ ಹೊರತಾಗಿ ಬೇರಾರೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯಲು ಅರ್ಹರಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಉದ್ಯೋಗಿಯ ಪತ್ನಿ ಉದ್ಯೋಗ ಹೊಂದುವ ಮೊದಲೇ ಮರಣ ಹೊಂದಿದ್ದರೆ ಮತ್ತು ದಂಪತಿಗೆ ಮಕ್ಕಳಿಲ್ಲದಿದ್ದರೆ ಮೃತ ವ್ಯಕ್ತಿಯ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ತಿರಸ್ಕರಿಸುವಂತಿಲ್ಲ ಎಂದಿದೆ.
ಜತೆಗೆ ಅರ್ಜಿದಾರರ ವಿದ್ಯಾರ್ಹತೆ ಅನುಗುಣವಾಗಿ ಅನುಕಂಪದ ಆಧಾರದ ಮೇಲೆ 12 ವಾರಗಳಲ್ಲಿ ಅವರನ್ನು ಸೂಕ್ತ ಹುದ್ದೆಗೆ ನೇಮಿ ಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವ ಮುಖೇನ ಅರ್ಜಿಯನ್ನು ಪುರಸ್ಕರಿಸಿದೆ.