-->
ದೇಶದ ವಿವಿಧ ರಾಜ್ಯಗಳ ಪೈಕಿ ಅತ್ಯಧಿಕ ಅವಧಿಯ ಕೆಲಸ ನಿರ್ವಹಿಸುವವರು ಕರ್ನಾಟಕ ರಾಜ್ಯದ ನ್ಯಾಯಾಂಗ ಇಲಾಖೆಯ ನೌಕರರು

ದೇಶದ ವಿವಿಧ ರಾಜ್ಯಗಳ ಪೈಕಿ ಅತ್ಯಧಿಕ ಅವಧಿಯ ಕೆಲಸ ನಿರ್ವಹಿಸುವವರು ಕರ್ನಾಟಕ ರಾಜ್ಯದ ನ್ಯಾಯಾಂಗ ಇಲಾಖೆಯ ನೌಕರರು

ದೇಶದ ವಿವಿಧ ರಾಜ್ಯಗಳ ಪೈಕಿ ಅತ್ಯಧಿಕ ಅವಧಿಯ ಕೆಲಸ ನಿರ್ವಹಿಸುವವರು ಕರ್ನಾಟಕ ರಾಜ್ಯದ ನ್ಯಾಯಾಂಗ ಇಲಾಖೆಯ ನೌಕರರು





ಕೇಂದ್ರ ಸರಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ನೌಕರರು ವಾರದಲ್ಲಿ 5 ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ದೇಶದ ವಿವಿಧ ರಾಜ್ಯಗಳ ಪೈಕಿ ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಶ್ಚಿಮ ಬಂಗಾಳ ಛತ್ತೀಸ್ಗಡ ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಸರಕಾರಿ ನೌಕರರು ವಾರದಲ್ಲಿ ಐದು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ಈ ರಾಜ್ಯಗಳ ನ್ಯಾಯಾಂಗ ಇಲಾಖಾ ನೌಕರರು ಕೂಡ ವಾರದಲ್ಲಿ ಐದು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ.


ದೇಶದ ವಿವಿಧ ರಾಜ್ಯಗಳ ಜಿಲ್ಲಾ ಮಟ್ಟದ ನ್ಯಾಯಾಂಗ ನೌಕರರು ಕರ್ತವ್ಯ ನಿರ್ವಹಿಸುವ ಅವಧಿ ಸಾಮಾನ್ಯವಾಗಿ ಪೂರ್ವಾಹ್ನ 10 ರಿಂದ ಸಂಜೆ 5 ಎಂದು ನಿಗದಿಯಾಗಿದೆ.


ಕರ್ನಾಟಕ ರಾಜ್ಯದ ಜಿಲ್ಲಾ, ತಾಲ್ಲೂಕು ನ್ಯಾಯಾಲಯಗಳಿಗೆ ವಾರದಲ್ಲಿ 5 ದಿನಗಳ ಕೆಲಸದ ಅವಧಿಯ ಬೇಡಿಕೆ ಇನ್ನೂ ಈಡೇರಿಲ್ಲ. ಕರ್ನಾಟಕ ರಾಜ್ಯ ಹೈಕೋರ್ಟ್ ದಿನಾಂಕ 1.1.2020 ರಿಂದ ಅನ್ವಯವಾಗುವಂತೆ ನ್ಯಾಯಾಲಯಗಳ ಕಚೇರಿ ಕರ್ತವ್ಯದ ಅವಧಿಯನ್ನು ಪೂರ್ವಾಹ್ನ 10 ರಿಂದ ಸಂಜೆ 6 ರ ವರೆಗೆ ನಿಗದಿಪಡಿಸಿದೆ.


ಈ ಹಿಂದೆ ನಮ್ಮ ರಾಜ್ಯದಲ್ಲಿ ನ್ಯಾಯಾಲಯಗಳ ಕಚೇರಿ ಅವಧಿ ಪೂರ್ವಾಹ್ನ 10-45 ರಿಂದ ಸಾಯಂಕಾಲ 5-30 ಗಂಟೆ ಎಂದು ನಿಗದಿಯಾಗಿತ್ತು‌. ಈಗ ದೈನಂದಿನ ವಿಚಾರಣೆಯ ಸಮಯವನ್ನು 30 ನಿಮಿಷಗಳಷ್ಟು ಹೆಚ್ಚಿಸಲಾಗಿದೆ. ನಾಲ್ಕನೇ ಶನಿವಾರಗಳು ವಿಚಾರಣೆಯಿಲ್ಲದ ದಿನವಾಗಿರುತ್ತವೆ. ಆದರೆ ನ್ಯಾಯಾಲಯದ ಕಚೇರಿಗಳು ಅರ್ಧ ದಿನ ಕಾರ್ಯನಿರ್ವಹಿಸುತ್ತವೆ.


ಜನವರಿ 1, 2020 ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳ ಕೆಲಸದ ಸಮಯವನ್ನು ಪರಿಷ್ಕರಿಸಲಾಗಿದೆ. ನಾಲ್ಕನೇ ಶನಿವಾರಗಳನ್ನು ವಿಚಾರಣೆಯಿಲ್ಲದ ದಿನಗಳೆಂದು ಘೋಷಿಸುವುದರಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಪ್ರತಿದಿನ ನ್ಯಾಯಾಲಯದ ವಿಚಾರಣೆಯ ಸಮಯವನ್ನು 30 ನಿಮಿಷಗಳಷ್ಟು ಹೆಚ್ಚಿಸಲಾಗಿದೆ.


ಕರ್ನಾಟಕ ಹೈಕೋರ್ಟ್‌ ಡಿಸೆಂಬರ್ 18, 2019 ರಂದು ಹೊರಡಿಸಿದ ಪೂರ್ಣ ನ್ಯಾಯಾಲಯದ ನಿರ್ಣಯದ ಆಧಾರದ ಮೇಲೆ ಡಿಸೆಂಬರ್ 30 ರಂದು ರಿಜಿಸ್ಟ್ರಾರ್-ಜನರಲ್ ಅಧಿಸೂಚನೆಯನ್ನು ಹೊರಡಿಸಿದ್ದು ಆ ಪ್ರಕಾರ ನ್ಯಾಯಾಲಯದ ಕಲಾಪದ ಸಮಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ, ಮತ್ತು ಮಧ್ಯಾಹ್ನ 2.45 ರಿಂದ ಸಂಜೆ 5.45 ರವರೆಗೆ ಎಂದು ಪರಿಷ್ಕೃತ ವಾಗಿದೆ.


ಊಟದ ವಿರಾಮ ಮಧ್ಯಾಹ್ನ 2 ರಿಂದ ಮಧ್ಯಾಹ್ನ 2.45 ರ ವರೆಗೆ‌. ಈ ಹಿಂದೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ, ಮತ್ತು ಮಧ್ಯಾಹ್ನ 3 ರಿಂದ ಸಂಜೆ 5.30 ರ ವರೆಗೆ ಕಲಾಪದ ಸಮಯ ನಿಗದಿಯಾಗಿತ್ತು. ಊಟದ ವಿರಾಮ ಮಧ್ಯಾಹ್ನ 2 ರಿಂದ ಮಧ್ಯಾಹ್ನ 3 ರವರೆಗೆ ಇತ್ತು.


ಹೈಕೋರ್ಟ್‌ನ ಅಧಿಸೂಚನೆಯ ಪ್ರಕಾರ, ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳ ಸಿಬ್ಬಂದಿಗೆ ಪರಿಷ್ಕೃತ ಕೆಲಸದ ಸಮಯ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಇರುತ್ತದೆ ಮತ್ತು ಮಧ್ಯಾಹ್ನ 2 ರಿಂದ ಮಧ್ಯಾಹ್ನ 2.45 ರವರೆಗೆ ಊಟದ ವಿರಾಮ ಇರುತ್ತದೆ.


ಜೂನ್ 13, 2019 ರ ಸರ್ಕಾರಿ ಅಧಿಸೂಚನೆಯ ಪ್ರಕಾರ, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಿಗೆ ನಾಲ್ಕನೇ ಶನಿವಾರಗಳನ್ನು ರಜಾದಿನವೆಂದು ಘೋಷಿಸಲಾಗಿದ್ದರೂ, ಡಿಸೆಂಬರ್ 12 ರಂದು ಅಧಿಸೂಚನೆ ಹೊರಡಿಸುವ ಮೂಲಕ ಸರ್ಕಾರ ಅದನ್ನು ಹಿಂತೆಗೆದುಕೊಂಡಿತು.


ಬೆಂಗಳೂರಿನ ವಕೀಲರ ಸಂಘ ಸೇರಿದಂತೆ ಕೆಲವು ವಕೀಲರ ಸಂಸ್ಥೆಗಳು ನಾಲ್ಕನೇ ಶನಿವಾರದ ರಜೆಯ ರದ್ದತಿಯನ್ನು ವಿರೋಧಿಸಿದ್ದವು. ವಕೀಲರ ಬೇಡಿಕೆಯನ್ನು ಪುರಸ್ಕರಿಸಿದ ಹೈಕೋರ್ಟ್ ನಾಲ್ಕನೇ ಶನಿವಾರದಂದು ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ನ್ಯಾಯ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ ಎಂಬ ಪ್ರಕಟಣೆ ಹೊರಡಿಸಿತು. ಅಂದು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಕರೆಯಲಾಗುವುದಿಲ್ಲ. ನ್ಯಾಯಾಲಯಗಳಲ್ಲಿ ವಿಚಾರಣೆ ಇರುವುದಿಲ್ಲ. ಆದರೆ ನ್ಯಾಯಾಲಯಗಳ ಕಚೇರಿಗಳು ಅರ್ಧ ದಿನ ಕಾರ್ಯ ನಿರ್ವಹಿಸುತ್ತವೆ ಮತ್ತು ಇದು ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನ್ವಯಿಸುತ್ತದೆ.


ನ್ಯಾಯಾಂಗ ಅಧಿಕಾರಿಗಳು ನಾಲ್ಕನೇ ಶನಿವಾರಗಳನ್ನು ನ್ಯಾಯಾಲಯ ತಪಾಸಣೆ ಮತ್ತು ಜೈಲು ಭೇಟಿಗಾಗಿ ಬಳಸಿಕೊಳ್ಳಬೇಕು. ಇದನ್ನು ಈ ಹಿಂದೆ ಮೂರನೇ ಶನಿವಾರ ಮಾಡಲಾಗುತ್ತಿತ್ತು ಎಂದು ಅಧಿಸೂಚನೆ ತಿಳಿಸಿದೆ.


ರಾಜ್ಯದ ಇತರ ಸರಕಾರಿ ಇಲಾಖೆಗಳಿಗೆ ನೀಡಿದಂತೆ ನ್ಯಾಯಾಲಯಗಳಿಗೂ ನಾಲ್ಕನೇ ಶನಿವಾರ ರಜೆ ಘೋಷಿಸಬೇಕು ಎಂಬ ಬೇಡಿಕೆಯೊಂದಿಗೆ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘವು ನೀಡಿದ ಲಿಖಿತ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ದ.ಕ.

Ads on article

Advertise in articles 1

advertising articles 2

Advertise under the article