
'ಹೈಕೋರ್ಟ್ ಬಾರ್ ಅಸೋಸಿಯೇಷನ್' ನೋಂದಣಿಗೆ ಎಎಬಿ ಆಕ್ಷೇಪ: ರಾಜ್ಯ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ
'ಹೈಕೋರ್ಟ್ ಬಾರ್ ಅಸೋಸಿಯೇಷನ್' ನೋಂದಣಿಗೆ ಎಎಬಿ ಆಕ್ಷೇಪ: ರಾಜ್ಯ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ
ಬೆಂಗಳೂರು ವಕೀಲರ ಸಂಘ (ಎಎಬಿ)ಕ್ಕೆ ಪರ್ಯಾಯವಾಗಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ರಚನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಎಬಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ)ಯು ಹೊಸ ಸಂಘ ನೋಂದಣಿ ಅಥವಾ ಮಾನ್ಯತೆ ನೀಡದಂತೆ ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದೆ.
ಬೆಂಗಳೂರು ವಕೀಲರ ಸಂಘದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಬಿ.ಎಂ. ಶ್ಯಾಮಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೋರ್ಟ್ ಅನುಮತಿ ಇಲ್ಲದೆ ಹೊಸ ಸಂಘದ ನೋಂದಣಿಗೆ ಮುಂದಾಗಬಾರದು ಎಂದು ಕೆಎಸ್‌ಬಿಸಿಗೆ ನಿರ್ದೇಶನ ನೀಡಿದೆ.
ನ್ಯಾಯಾಲಯದ ಅನುಮತಿ ಇಲ್ಲದೆ ಹೊಸ ಸಂಘದ ನೋಂದಣಿ ಅಥವಾ ಸಂಯೋಜನೆ ಕೋರಿ ಸಲ್ಲಿಕೆಯಾಗಿರುವ ಅಥವಾ ಸಲ್ಲಿಕೆ ಆಗುವ ಅರ್ಜಿಗಳನ್ನು ಪರಿಗಣಿಸದಂತೆ ನ್ಯಾಯಪೀಠ ತನ್ನ ನಿರ್ದೇಶನದಲ್ಲಿ ಸೂಚನೆ ನೀಡಿದೆ.
ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಸೆಕ್ಷನ್ 13ರಡಿಯಲ್ಲಿ ಬೆಂಗಳೂರು ವಕೀಲ ಸಂಘ ನೋಂದಣಿಯಾಗಿದೆ. ಕೇಂದ್ರ ಕಾಯ್ದೆ 1987 ಅಡಿಯಲ್ಲೂ ಎಎಬಿಗೆ ಮಾನ್ಯತೆ ದೊರೆತಿದೆ. ಹಾಗಾಗಿ, ಹೊಸ ಸಂಘದ ರಚನೆ ಸಂಬಂಧ ಕೆಎಸ್‌ಬಿಸಿ ಅರ್ಜಿಯನ್ನು ಪರಿಗಣಿಸಿದರೆ ಹೊಸ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಎಎಬಿ ಪರ ವಕೀಲರು ವಾದಿಸಿದರು.
ಕೆಎಸ್‌ಬಿಸಿ ಒಡೆದು ಆಳುವ ಕೆಲಸ ಮಾಡುತ್ತಿದೆ. ನಮ್ಮದೇ ಒಂದಷ್ಟು ವಕೀಲರು ನಮ್ಮ ಎದುರು ನಿಂತಾಗ ನಮಗೆ ನೋವಾಗುತ್ತಿದೆ. ಎಎಬಿಯಲ್ಲಿ ಅಧ್ಯಕ್ಷರಾಗಿದ್ದವರು ಮತ್ತು ಚುನಾವಣೆಯಲ್ಲಿ ಸೋತವರು ಸೇರಿಕೊಂಡು ಹೊಸ ಸಂಘ ರಚನೆಗೆ ಮುಂದಾಗಿದ್ದಾರೆ ಎಂದು ಎಎಬಿ ಪರ ವಕೀಲರು ವಾದ ಮಂಡಿಸಿದರು.
ಕರ್ನಾಟಕ ಸಂಘಗಳ ನೋಂದಣಿಕಾಯ್ದೆ 1960 ಸೆಕ್ಷನ್ 25, 27ರಡಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ಬಾರ್ ಅಡೋಸಿಯೇಷನ್ ಆಗಸ್ಟ್ 22ರಿಂದ ಯಥಾಸ್ಥಿತಿ ಕಾಪಾಡಬೇಕು ದೂರು ಪರಿಶೀಲನೆಗೆ ಸೆಪ್ಟೆಂಬರ್ 9ರಂದು ವಿಚಾರಣೆ ನಿಗದಿಪಡಿಸಲಾಗಿದ್ದು, ಅಂದು ಹೈಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಬೆಂಗಳೂರು ವಕೀಲರ ಸಂಘವು ತಮ್ಮ ಲಿಖಿತ ಹೇಳಿಕೆ ಮತ್ತು ಪೂರಕ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು ಎಂದು ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಸಂಘಗಳ ಜಿಲ್ಲಾ ನೋಂದಣಾಧಿಕಾರಿಯು ಆಗಸ್ಟ್ 21ರಂದು ಆದೇಶ ಹೊರಡಿಸಿದ್ದಾರೆ.