-->
ಅವಧಿ ಮುಗಿದರೂ ನಡೆಯದ ಚುನಾವಣೆ: ಸಿಓಪಿ ಅರ್ಜಿ ಪರಿಶೀಲನೆಯ ನೆಪ?- ರಾಜ್ಯ ವಕೀಲರ ಪರಿಷತ್ತಿನ ಸ್ಪಷ್ಟನೆ ಕೋರಿದ ಕರ್ನಾಟಕ ಹೈಕೋರ್ಟ್

ಅವಧಿ ಮುಗಿದರೂ ನಡೆಯದ ಚುನಾವಣೆ: ಸಿಓಪಿ ಅರ್ಜಿ ಪರಿಶೀಲನೆಯ ನೆಪ?- ರಾಜ್ಯ ವಕೀಲರ ಪರಿಷತ್ತಿನ ಸ್ಪಷ್ಟನೆ ಕೋರಿದ ಕರ್ನಾಟಕ ಹೈಕೋರ್ಟ್

ಅವಧಿ ಮುಗಿದರೂ ನಡೆಯದ ಚುನಾವಣೆ: ಸಿಓಪಿ ಅರ್ಜಿ ಪರಿಶೀಲನೆಯ ನೆಪ?- ರಾಜ್ಯ ವಕೀಲರ ಪರಿಷತ್ತಿನ ಸ್ಪಷ್ಟನೆ ಕೋರಿದ ಕರ್ನಾಟಕ ಹೈಕೋರ್ಟ್





ಐದು ವರ್ಷಗಳ ಅವಧಿ 2023ರಲ್ಲಿ ಮುಕ್ತಾಯಗೊಂಡಿದ್ದರೂ ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ಏಕೆ ನಡೆದಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸೂಚಿಸಿದೆ.


ವಕೀಲರಿಗೆ ಸಂಬಂಧಿಸಿದ "ವೃತ್ತಿ ಪ್ರಮಾಣ ಪತ್ರ" (COP) ವಿತರಣೆಗೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದೇ ಕರ್ನಾಟಕ ವಕೀಲರ ಪರಿಷತ್ (KSBC)ಗೆ ಚುನಾವಣೆ ನಡೆಸದಿರಲು ಕಾರಣವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತೀಯ ವಕೀಲರ ಪರಿಷತ್ (BCI) ಹಾಗೂ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿದೆ.


ವಕೀಲರ ಪರಿಷತ್ತಿನ ಆಡಳಿತ ಮಂಡಳಿಗೆ ನಿಗದಿಪಡಿಸಿದ ಐದು ವರ್ಷಗಳ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ರಹಮತುಲ್ಲಾ ಕೊತ್ವಾಲ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿದೆ.


2025ರ ಜುಲೈ 31ರಂದು ಬಿಸಿಐ ಹೊರಡಿಸಿರುವ ಸಂವಹನದಲ್ಲಿ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಹೀಗಿರುವಾಗ, ಸಿಒಪಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಬಾಕಿ ಇರುವುದು ಚುನಾವಣೆ ನಡೆಸದಿರಲು ಒಂದು ಕಾರಣವೇ ಎಂಬ ಬಗ್ಗೆ, ಈ ನ್ಯಾಯಾಲಯಕ್ಕೆ ಸ್ಮಷ್ಟಿಕರಣ ಬೇಕಿದೆ ಎಂದು ನ್ಯಾಯಪೀಠ, ಪಕ್ಷಕಾರರಿಗೆ ತಾಕೀತು ಮಾಡಿತು.


ಕೆಎಸ್‌ಬಿಸಿ ಪರ ವಾದ ಮಂಡಿಸಿದ ವಕೀಲರು, "ಸಿಒಪಿ ಸಂಬಂಧ ಸ್ವೀಕರಿಸಲಾಗಿರುವ ಅರ್ಜಿಗಳಲ್ಲಿ ಅಂದಾಜು 29 ಸಾವಿರ ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿದೆ. ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.


ಇದರಿಂದ ಆಕ್ರೋಶಗೊಂಡ ನ್ಯಾಯಪೀಠ, 'ಸುಮಾರು 29 ಸಾವಿರ ಅರ್ಜಿಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆಯೇ? ಅದನ್ನು ಆಮೆಗತಿಯಲ್ಲಿ ಪೂರ್ಣಗೊಳಿಸುವಿರೇ ಅಥವಾ ಶರವೇಗದಲ್ಲಿ ಮಾಡುವಿರೇ? ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಕಾರಣಕ್ಕೆ ಚುನಾವಣೆ ನಡೆಸಬಾರದೇಕೆ" ಎಂದು ಪ್ರಶ್ನಿಸಿತು.


ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಬಿಸಿಐ ಪರ ವಕೀಲರು, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯ ಬಗ್ಗೆ ಪೀಠಕ್ಕೆ ತಿಳಿಸಿದರು.


ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷದ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದ್ದರಿಂದ, ವಕೀಲರ ಕಾಯ್ದೆ 1961ರ ಸೆಕ್ಷನ್ 8ರಡಿ ಕೆಎಸ್‌ಬಿಸಿಯಲ್ಲಿ ಕಾನೂನು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೂಡಲೇ ಚುನಾವಣೆ ನಡೆಸಬೇಕು. ಅದಕ್ಕೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಕೋರಿ 2025ರ ಜನವರಿ 7ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬಿಸಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.


ಅವಧಿ ಮುಗಿದ ನಂತರ ಚುನಾವಣೆ ನಡೆಸುವ ಬದಲು ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದು, ಅದು ವಕೀಲರ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಬಿಸಿಐಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Ads on article

Advertise in articles 1

advertising articles 2

Advertise under the article