
ಕಕ್ಷಿದಾರರ ಜೊತೆಗೆ ಮೊಬೈಲ್ ಮಾತುಕತೆಯೂ ಸಾಕ್ಷಿಯಾಗಬಹುದು: ವಕೀಲರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಸುಪ್ರೀಂ ನಕಾರ
ಕಕ್ಷಿದಾರರ ಜೊತೆಗೆ ಮೊಬೈಲ್ ಮಾತುಕತೆಯೂ ಸಾಕ್ಷಿಯಾಗಬಹುದು: ವಕೀಲರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಸುಪ್ರೀಂ ನಕಾರ
ಕ್ರಿಮಿನಲ್ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯ ಜೊತೆಗೂಡಿ ಅಪರಾಧಿಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪ ಹೊತ್ತಿರುವ ವಕೀಲರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ನ ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಪಂಕಜ್ ಮಿಥಲ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ವಕೀಲರು ಕಾನೂನು ವೃತ್ತಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಯಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.
ಯಾವುದೇ ನೇರ ಪುರಾವೆಗಳು ಲಭ್ಯವಿಲ್ಲದಿದ್ದಾಗ, ವಕೀಲರು ಮತ್ತು ಆರೋಪಿ ನಡುವಿನ ಮೊಬೈಲ್ ಸಂಭಾಷಣೆಗಳು ಸಾಕ್ಷಿಯಾಗಲಾರದು ಎಂಬ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಕಕ್ಷಿದಾರರ ಜೊತೆಗೆ ಮೊಬೈಲ್ ಮಾತುಕತೆಯೂ ಸಾಕ್ಷಿಯಾಗಬಹುದು ಎಂದು ಸ್ಪಷ್ಟಪಡಿಸಿತು.
"ತನಿಖೆಯ ಸಮಯದಲ್ಲಿ ವಕೀಲರ ವಿರುದ್ಧ ದೋಷಾರೋಪಣೆ ಮಾಡುವ ಯಾವುದೇ ಸಾಕ್ಷ್ಯವು ಲಭಿಸಿದ್ದರೆ, ಅದನ್ನು ಹಾಗೆಯೇ ಸ್ವೀಕರಿಸಬೇಕು. ಈ ಪರಿಧಿಯಲ್ಲಿ ಫೋನ್ ಸಂಭಾಷಣೆಗಳು ಕೂಡ ಬರುತ್ತವೆ" ಎಂದು ನ್ಯಾಯಮೂರ್ತಿ ಮಿಥಲ್ ವಿವರಿಸಿದರು.
"ವಕೀಲರು ಆರೋಪಿಯೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ. ನೇರ ಸಾಕ್ಷ್ಯಗಳು ಇರಬೇಕು. ಆರೋಪಿಯೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿರುವುದು ಅಪರಾಧವಲ್ಲ" ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ,
"ನಿಮ್ಮ ವೃತ್ತಿ ಸಲಹೆಯನ್ನು ಕಕ್ಷಿದಾರರಿಗೆ ಫೋನ್ ಮುಖಾಂತರ ನೀಡಬೇಡಿ. ಯಾವಾಗಲೂ ಕಕ್ಷಿದಾರರನ್ನು ನಿಮ್ಮ ಕಚೇರಿಗೆ ಕರಿಸಿ ನಿಮ್ಮ ಚೇಂಬರ್‌ನಲ್ಲಿ ಕಕ್ಷಿದಾರರಿಗೆ ಸೂಕ್ತ ಸಲಹೆ ನೀಡಿ. ಆದರೆ, ಫೋನ್‌ನಲ್ಲಿ ಅಲ್ಲ.. ಫೋನ್ ಸಂಭಾಷಣೆಯನ್ನು ಸಾಕ್ಷ್ಯವನ್ನು ದಾಖಲಿಸಬಹುದು. ಈಗಿನ ಕಾಲದಲ್ಲಿ ವಕೀಲರೂ ಎಚ್ಚರಿಕೆಯಿಂದ ಇರುತ್ತಾರೆ" ಎಂದು ನ್ಯಾಯಪೀಠ ಸೂಕ್ಷ್ಮವಾಗಿ ಹೇಳಿತು.
ಪ್ರಕರಣ: ವಿನೋದ್ ವಿರುದ್ಧ ರಾಜಸ್ತಾನ
ಸುಪ್ರೀಂ ಕೋರ್ಟ್, ಎಸ್‌ಎಲ್‌ಪಿ(ಕ್ರಿಮಿನಲ್) 37200/2025, Dated 01-08-2025