
ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಒಪ್ಪಿದರೂ ಪ್ರಕರಣ ರದ್ದುಪಡಿಸಲಾಗದು- ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಒಪ್ಪಿದರೂ ಪ್ರಕರಣ ರದ್ದುಪಡಿಸಲಾಗದು- ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಒಪ್ಪಿದರೂ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
"ಅನಿಲ್ ಮತ್ತೊಬ್ಬರು ವಿರುದ್ಧ ಕರ್ನಾಟಕ ರಾಜ್ಯ" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿ ಅರ್ಜಿದಾರರು (ಆರೋಪಿ) ಹಾಗೂ ದೂರುದಾರರು (ಸಂತ್ರಸ್ತೆ) ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅತ್ಯಾಚಾರ ಗಂಭೀರ ಅಪರಾಧ ಕೃತ್ಯವಾಗಿದೆ. ಹೀಗಾಗಿ, ಸಂತ್ರಸ್ತೆ ರಾಜಿಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅಥವಾ ಆರೋಪಿಯು ಸಂತ್ರಸ್ತೆಯನ್ನು ಮದುವೆ ಆಗಿದ್ದಾನೆ ಎಂಬ ಕಾರಣಕ್ಕೆ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ವಿಜಯಪುರದ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ:
ಸಂತ್ರಸ್ತೆ ಜತೆ ಒಡನಾಟದಲ್ಲಿ ಇದ್ದ ಆರೋಪಿ ಸಂತ್ರಸ್ತೆ ಜೊತೆ ಲೈಂಗಿಕ ಸಂಬಂಧ ಹೊಂದಿದ್ದು, ಈ ಮೂಲಕ ಸಂತ್ರಸ್ತೆ ಗರ್ಭಿಣಿಯಾಗಿದ್ದರು. ಆ ಬಳಿಕ 2019ರಲ್ಲಿ ಆಕೆಯನ್ನು ಅಪಹರಿಸಿದ್ದ. ಈ ಬಗ್ಗೆ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸ್ ಠಾಣೆಯ ಅತ್ಯಾಚಾರ ದಾಖಲಿಸಿಕೊಂಡಿದ್ದರು.
ಈ ಪ್ರಕರಣ ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಜೈಲು ಸೇರಿರುವ ಆರೋಪಿ ಹಾಗೂ ಸಂತ್ರಸ್ತೆ ಒಂಟಿಯಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.
ಅರ್ಜಿದಾರರಿಬ್ಬರೂ ಪರಸ್ಪರ ಸಮ್ಮತಿಯ ಮೇರೆಗೆ ಮದುವೆಯಾಗಿದ್ದು, ಮಗು ಜನಿಸಿದೆ. ಈ ಬಗ್ಗೆ ಜನನ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದು, ಪತಿ ಈಗಲೂ ಜೈಲಿನಲ್ಲಿದ್ದಾರೆ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಲು ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿರುವ ಮನವಿ ತಿರಸ್ಕರಿಸಿತು. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳು ಎನ್ನಲಾಗಿದೆ. ಅದರಂತೆ, ಸಂತ್ರಸ್ತ ಅಪ್ರಾಪ್ತಳಾಗಿದ್ದರೆ, ಆಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರೂ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗದು ಎಂದು ಹೇಳಿದೆ
ಇನ್ನು, ಸಂತ್ರಸ್ತೆ ವಿಚಾರಣಾ ನ್ಯಾಯಾಲಯದ ಎದುರು, ಘಟನೆ ನಡೆದಾಗ ತನಗೆ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿಕೆ ನೀಡಿದ್ದಾಳೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳೇ ಅಥವಾ ವಯಸ್ಕಳಾಗಿದ್ದಳೇ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ತೀರ್ಮಾನಿಸಬೇಕು.
"ಗ್ಯಾನ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ" 2012 10 SCC 303 ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಅತ್ಯಾಚಾರದಂತಹ ಹೀನ ಕೃತ್ಯ ನಡೆದಾಗ ಆರೋಪಿ-ಸಂತ್ರಸ್ತೆ ಒಪ್ಪಿಗೆ ನೀಡಿದರೂ ಪ್ರಕರಣ ರದ್ದು ಪಡಿಸಬಾರದು ಎಂಬ ಮಾರ್ಗಸೂಚಿ ಇಟ್ಟಿದೆ ಎಂಬುದನ್ನು ಉಲ್ಲೇಖಿಸಿತು.
ಮುಖ್ಯವಾಗಿ ಅರ್ಜಿದಾರರು ಕೋರಿರುವಂತೆ ಅತ್ಯಾಚಾರ ಆರೋಪ ಪ್ರಕರವಣನ್ನು ಸಿ.ಆರ್.ಪಿ.ಸಿ ಸೆಕ್ಷನ್ 482 ರ ಅಡಿ ನ್ಯಾಯಾಲಯದ ಅಧಿಕಾರ ಬಳಸಿ ರದ್ದುಪಡಿಸಿದರೆ ಅದು ಸಮಾಜಕ್ಕೆ ಕಟ್ಟ ಸಂದೇಶ ರವಾನಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಅರ್ಜಿ ಕುರಿತು. ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅನಿಲ್ ಮತ್ತೊಬ್ಬರು ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್(ಕಲ್ಬುರ್ಗಿ ಪೀಠ), CRL.P 201199/2021 Dated 29-10-2021