-->
ನಾಪತ್ತೆ ದೂರು ಬಂದರೆ ನಿರ್ಲಕ್ಷ್ಯ ಸಲ್ಲ: ಪೊಲೀಸ್ ವ್ಯವಸ್ಥೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್‌

ನಾಪತ್ತೆ ದೂರು ಬಂದರೆ ನಿರ್ಲಕ್ಷ್ಯ ಸಲ್ಲ: ಪೊಲೀಸ್ ವ್ಯವಸ್ಥೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್‌

ನಾಪತ್ತೆ ದೂರು ಬಂದರೆ ನಿರ್ಲಕ್ಷ್ಯ ಸಲ್ಲ: ಪೊಲೀಸ್ ವ್ಯವಸ್ಥೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್‌





ವ್ಯಕ್ತಿಯ ನಾಪತ್ತೆಗೆ ಸಂಬಂಧಿಸಿದಂತೆ ದೂರು ನೀಡಲು ಬಂದರೆ, ನಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


"ರಾಮಕೃಷ್ಣ ವಿರುದ್ಧ ಪೊಲೀಸ್ ಮಹಾನಿರ್ದೇಶಕರು ಮತ್ತಿತರರು" (WPHC NO.100012/2024) ಪ್ರಕರಣದಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ನಿಗ್ರಹ ಪಡೆ(Anti-Human Trafficking Cell/Unit)ಗಳ ಕಾರ್ಯಾಚರಣೆ ಬಗ್ಗೆ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾ ಎಸ್‌ಪಿ ಮತ್ತು ಕಮಿಷನರ್‌ಗಳಿಗೆ ಕಳುಹಿಸಿದ ಸುತ್ತೋಲೆ ಆದೇಶ (1/aparadha/17:(2)/2010, dated 23.02.2010)ದ ಬಗ್ಗೆ ಗಮನ ಸೆಳೆದ ಹೈಕೋರ್ಟ್ ನ್ಯಾಯಪೀಠ, ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವಂತೆ ಸಲಹೆ ನೀಡಿದೆ.


ರಾಜ್ಯದಲ್ಲಿ ಐದು ನಿಗ್ರಹ ಪಡೆಗಳಿದ್ದು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಮೈಸೂರುಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಪಡೆ ಕಾರ್ಯಾಚರಣೆ ಮಾಡುತ್ತಿದೆ. ನಾಲ್ಕು ಹೆಚ್ಚುವರಿ ನಿಗ್ರಹಪಡೆಯನ್ನು ಸ್ಥಾಪಿಸಲು ಒತ್ತಾಯ ಕೇಳಿಬಂದಿದೆ. ಗುಲ್ಬರ್ಗ, ರಾಯಚೂರು, ದಾವಣಗೆರೆ ಮತ್ತು ಕೋಲಾರಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಪಡೆಗಳನ್ನು ಸ್ಥಾಪಿಸುವ ಪ್ರಸ್ತಾಪ ಇದೆ ಎಂದು ಕರ್ನಾಟಕ ಸರ್ಕಾರ ನ್ಯಾಯಪೀಠದ ಮುಂದೆ ವಾದಿಸಿತು.


ನಿಗ್ರಹ ಪಡೆಗಳನ್ನು ವಾಹನ, ಕ್ಯಾಮರಾ ಇತ್ಯಾದಿ ಅತ್ಯಾಧುನಿಕ ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಪೂರೈಸಿ ಕೇಂದ್ರಗಳನ್ನು ಬಲಪಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು.


ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯಾದವರ ಬಗ್ಗೆ ದೂರು ಸ್ವೀಕರಿಸುವಾಗ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿ ಕ್ರಮಗಳು


► ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ದೂರುಗಳನ್ನು ಪ್ರಾಮಾಣಿಕವಾಗಿ ದಾಖಲು ಮಾಡಿಕೊಳ್ಳಬೇಕು. ಆ ದೂರುಗಳು ಕಾಣೆಯಾದ ಮಹಿಳೆ/ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದೆಯೇ ಅಥವಾ ಯಾವುದೇ ಇತರ ವ್ಯಕ್ತಿಗೆ ಸಂಬಂಧಿಸಿದೆಯೇ ಎಂಬುದನ್ನು ಸಂಬಂಧಿತ ಶಾಸನಬದ್ಧ ಪ್ರಾಧಿಕಾರಗಳು ನಿರ್ದಿಷ್ಟವಾಗಿ ಗಮನಿಸಿದ ನಂತರ ಮಾನವ ಕಳ್ಳ ಸಾಗಣೆ ಘಟಕ/ಕೋಶಕ್ಕೆ ಮಾಹಿತಿ ನೀಡಬೇಕು.


► ಯಾವುದೇ ದೂರನ್ನು ಯಾವುದೇ ಸಂದರ್ಭಗಳಲ್ಲಿಯೂ, ಯಾವುದೇ ಪೊಲೀಸ್‌ ಅಧಿಕಾರಿಗಳು ತಿರಸ್ಕರಿಸಬಾರದು ಮತ್ತು ಅಂತಹ ಪ್ರತಿಯೊಂದು ದೂರನ್ನು ತಕ್ಷಣವೇ ಪರಿಗಣಿಸಿ, ಆ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.


► ವ್ಯಕ್ತಿಯ ಮೃತದೇಹಗಳು ನಂತರ ಪತ್ತೆಯಾದರೆ, ತನಿಖಾ ಅಧಿಕಾರಿಗಳು ಡಿ.ಎನ್‌.ಎ. ವಿಶ್ಲೇಷಣೆಯ ಮೂಲಕ ಹೋಲಿಕೆ ಮಾಡಲು ಸಾಧ್ಯವಾಗುವಂತೆ ಕಾಣೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಫೋರೆನ್ಸಿಕ್‌ ಪುರಾವೆಗಳನ್ನು ಪಡೆದುಕೊಳ್ಳಬೇಕು.


► ಕಾಣೆಯಾದ ವ್ಯಕ್ತಿಯ ಇತ್ತೀಚಿನ ಭಾವಚಿತ್ರವನ್ನು ಸಂಗ್ರಹಿಸಿ ಅದರ ಪ್ರತಿಗಳನ್ನು ಎ.ಯು.ಟಿ.ಎಚ್‌.ಯು, ಸಿ.ಐ.ಡಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗಳಿಗೂ ಒದಗಿಸಬೇಕು.


► ಕಾಣೆಯಾದವರ ದೂರಿನ ವಿವರಗಳನ್ನು ದೂರು ದಾಖಲಾದ 24 ಗಂಟೆಗಳ ಒಳಗೆ ಬೀಟ್‌ ಪೊಲೀಸ್‌ ಸಿಬ್ಬಂದಿ ಮತ್ತು ಹೊಯ್ಸಳ ಮುಂತಾದ ಮೊಬೈಲ್‌ ಪೊಲೀಸ್‌ ಘಟಕಗಳಿಗೆ ಎಲೆಕ್ಟ್ರಾನಿಕ್‌ ರೂಪದಲ್ಲಿ ರವಾನಿಸಬೇಕು.

► ಕಾಣೆಯಾದವರ ವಿವರಗಳನ್ನು (ಆ ನಿಟ್ಟಿನಲ್ಲಿ ಅಗತ್ಯ ಒಪ್ಪಿಗೆ ಪಡೆದ ನಂತರ) ಮಾನ್ಯತೆ ಪಡೆದ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಹಾಗೂ ಆಡಿಯೊ ಮತ್ತು ವಿಡಿಯೊ ಸುದ್ದಿ ಜಾಲಗಳ ಮೂಲಕ ಪ್ರಕಟಿಸಬೇಕು. ದೂರಿನ ವಿವರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪೋರ್ಟಲ್‌ಗಳಲ್ಲಿ ಹಾಗೂ ಇತರ ಪೋರ್ಟಲ್‌ಗಳಲ್ಲಿ ಅಪ್‌ಲೋಡ್‌ ಮಾಡಬೇಕು.

Ads on article

Advertise in articles 1

advertising articles 2

Advertise under the article