-->
ವಜಾಗೊಂಡರೂ ಗಳಿಕೆ ರಜೆಗೆ ನೌಕರ ಅರ್ಹ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ವಜಾಗೊಂಡರೂ ಗಳಿಕೆ ರಜೆಗೆ ನೌಕರ ಅರ್ಹ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ವಜಾಗೊಂಡರೂ ಗಳಿಕೆ ರಜೆಗೆ ನೌಕರ ಅರ್ಹ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಉದ್ಯೋಗಿ ಸೇವೆಯಿಂದ ವಜಾಗೊಳಿಸಲ್ಪಟ್ಟರೂ ಆತನ ಖಾತೆಯಲ್ಲಿರುವ ಗಳಿಕೆ ರಜೆಯನ್ನು ನಗದೀಕರಿಸಲು ಅರ್ಹನಾಗಿರುತ್ತಾನೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್ ರಜೆ ನಗದೀಕರಣವನ್ನು ಎತ್ತಿಹಿಡಿದಿದೆ. ಸಂವಿಧಾನದ 300 ಎ ವಿಧಿಯ ಅಡಿಯಲ್ಲಿ ರಜೆ ನಗದೀಕರಣವು ಒಂದು ಆಸ್ತಿಯ ಹಕ್ಕು ಮತ್ತು ಆ ಹಕ್ಕನ್ನು ಕಾನೂನು ಬಾಹಿರವಾಗಿ ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್ ಸಂವಿಧಾನದ ವಿಧಿ 300-A ಅಡಿಯಲ್ಲಿ ರಜೆ ನಗದೀಕರಣವನ್ನು ಮೂಲಭೂತ ಆಸ್ತಿ ಹಕ್ಕು ಎಂದು ಎತ್ತಿಹಿಡಿದಿದೆ. ರಜೆ ನಗದೀಕರಣವು ಭಾರತೀಯ ಸಂವಿಧಾನದ 300-ಎ ವಿಧಿಯ ಅಡಿಯಲ್ಲಿ ರಕ್ಷಿಸಲ್ಪಟ್ಟ ಸಾಂವಿಧಾನಿಕ ಆಸ್ತಿ ಹಕ್ಕು ಎಂದು ಪುನರುಚ್ಚರಿಸಿದೆ.


"ಜಿ. ಲಿಂಗನಗೌಡ ವಿರುದ್ಧ ಜನರಲ್ ಮ್ಯಾನೇಜರ್, ಕರ್ನಾಟಕ ಗ್ರಾಮೀಣ ಬ್ಯಾಂಕ್" ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು ದಿನಾಂಕ 19.2.2025ರಂದು ಈ ಮಹತ್ವದ ತೀರ್ಪು ನೀಡಿದೆ.


ಒಬ್ಬ ಉದ್ಯೋಗಿ, ಸೇವೆಯಿಂದ ವಜಾಗೊಳಿಸಲ್ಪಟ್ಟಿದ್ದರೂ ಸಹ, ಗಳಿಕೆಯ ರಜೆಯನ್ನು ನಗದೀಕರಣಗೊಳಿಸಲು ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಜಾಗೊಳಿಸಿದ ಉದ್ಯೋಗಿಗೆ ರಜೆ ನಗದೀಕರಣವನ್ನು ನೀಡಲು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿರಾಕರಿಸುವುದು ಕಾನೂನುಬಾಹಿರವಾಗಿದೆ, ಏಕೆಂದರೆ ಸೇವಾ ಜೀವನದಲ್ಲಿ ಆರ್ಜಿಸಿದ ಪ್ರಯೋಜನಗಳು ಒಮ್ಮೆ ಸಂಗ್ರಹವಾದ ನಂತರ, ಅದು ಉದ್ಯೋಗಿಯ ಆಸ್ತಿಯಾಗುತ್ತದೆ ಮತ್ತು ನಿರಂಕುಶವಾಗಿ ತಡೆಹಿಡಿಯಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.


ಪ್ರಕರಣದ ಹಿನ್ನೆಲೆ ಈ ಕೆಳಗಿನಂತಿದೆ.


ತುಂಗಭದ್ರ ಗ್ರಾಮೀಣ ಬ್ಯಾಂಕಿನ (ಈಗ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್) ಮಾಜಿ ಸಹಾಯಕ ವ್ಯವಸ್ಥಾಪಕ ಜಿ. ಲಿಂಗನಗೌಡ ಅವರು 2012 ರಲ್ಲಿ ಶಿಸ್ತು ಕ್ರಮಗಳನ್ನು ಎದುರಿಸಿದರು, ಇದರ ಪರಿಣಾಮವಾಗಿ ಡಿಸೆಂಬರ್ 19, 2014 ರಂದು ದುರ್ನಡತೆಯ ಕಾರಣ ನೀಡಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಅವರನ್ನು ವಜಾಗೊಳಿಸಿದ ನಂತರ, ಅವರು ಸೇವಾ ಜೀವನದಲ್ಲಿ ಅರ್ಜಿಸಿದ ಸೌಲಭ್ಯಗಳನ್ನು ಪಾವತಿಸಲು, ವಿಶೇಷವಾಗಿ ಅವರ ಅಧಿಕಾರಾವಧಿಯಲ್ಲಿ ಸಂಗ್ರಹವಾದ 220 ದಿನಗಳ ಗಳಿಕೆ/ಸವಲತ್ತು ರಜೆಯನ್ನು ನಗದೀಕರಿಸಲು ಕೋರಿದರು. ಆದರೆ ಬ್ಯಾಂಕ್ ಅವರ ವಿನಂತಿಯನ್ನು ನಿರಾಕರಿಸಿತು.


ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ (ಅಧಿಕಾರಿಗಳು ಮತ್ತು ಉದ್ಯೋಗಿಗಳು) ಸೇವಾ ನಿಯಮಗಳು, 2013 ರ ನಿಯಮ 67 ಅನ್ನು ಉಲ್ಲೇಖಿಸಿ, ಬ್ಯಾಂಕ್ ನ ಸೇವಾ ನಿಯಮಗಳ ಪ್ರಕಾರ, ವಜಾಗೊಳಿಸಿದ ನೌಕರರು ರಜೆ ನಗದೀಕರಣವನ್ನು ಪಡೆಯುವ ಅವಕಾಶವನ್ನು ನಿರಾಕರಿಸಿತು.


ಬ್ಯಾಂಕಿನ ಆದೇಶದಿಂದ ಬಾಧಿತರಾದ ಶ್ರೀ ಜಿ ಲಿಂಗನಗೌಡ ಅವರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಗಳಿಕೆ ರಜೆ ನಗದೀಕರಣದ ನಿರಾಕರಣೆಯನ್ನು ಪ್ರಶ್ನಿಸಿದರು. ರಜೆ ನಗದೀಕರಣವು ಶಾಸನಬದ್ಧ ಹಕ್ಕು ಮತ್ತು ಅದನ್ನು ನಿರಂಕುಶವಾಗಿ ನಿರಾಕರಿಸಲಾಗುವುದಿಲ್ಲ ಎಂದು ಅವರು ವಾದಿಸಿದರು.


ರಿಟ್ ಅರ್ಜಿ ಸಂಖ್ಯೆ 1347/2016 ರಲ್ಲಿ ಬಾಂಬೆ ಹೈಕೋರ್ಟ್‌ನ ಪೂರ್ವನಿದರ್ಶನವನ್ನು ಉಲ್ಲೇಖಿಸಿ, ರಜೆ ನಗದೀಕರಣ ಸೇರಿದಂತೆ ಸೇವಾ ಜೀವನದಲ್ಲಿ ಅರ್ಜಿಸಿದ ಸೌಲಭ್ಯಗಳು ಸಂರಕ್ಷಿತ ಆಸ್ತಿ ಹಕ್ಕುಗಳಾಗಿವೆ ಎಂದು ಅವರು ವಾದಿಸಿದರು. ಮತ್ತೊಂದೆಡೆ, ಬ್ಯಾಂಕಿನ ವಕೀಲರು ಬ್ಯಾಂಕ್ ನ ನಿರ್ಧಾರವನ್ನು ಸಮರ್ಥಿಸಿಕೊಂಡರು, ಉದ್ಯೋಗಿ ಸೇವೆಯಲ್ಲಿಲ್ಲದಿದ್ದರೆ, ಅವರು ಗಳಿಕೆ/ಸವಲತ್ತು ರಜೆಯ ನಗದೀಕರಣಕ್ಕೆ ಅರ್ಹರಲ್ಲ ಎಂದು ನಿಯಮ 67 ಸ್ಪಷ್ಟವಾಗಿ ಷರತ್ತು ವಿಧಿಸಿದೆ ಎಂಬ ಅಂಶವನ್ನು ಹೈಕೋರ್ಟಿನ ಅವಗಾಹನೆಗೆ ತಂದರು.


ಲಿಂಗನಗೌಡ ಅವರನ್ನು ದುರ್ನಡತೆಯ ಕಾರಣ ವಜಾಗೊಳಿಸಲಾಗಿರುವುದರಿಂದ, ಬ್ಯಾಂಕಿನ ನಿಯಮದ ವ್ಯಾಖ್ಯಾನದ ಪ್ರಕಾರ, ಅವರು ಸೇವಾ ಸೌಲಭ್ಯಗಳಿಗೆ ಅನರ್ಹರಾಗಿದ್ದಾರೆ ಎಂದು ವಾದಿಸಿದರು.


ಉಭಯ ಪಕ್ಷಕಾರರ ಪರ ವಕೀಲರ ವಾದವನ್ನು ಆಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅನ್ವಯವಾಗುವ ನಿಯಮಗಳು ಮತ್ತು ಹಿಂದಿನ ನ್ಯಾಯಾಂಗ ತೀರ್ಪುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.


ಸೇವಾ ನಿಯಮಗಳ ನಿಯಮ 61 ನೌಕರನಿಗೆ ಕರ್ತವ್ಯದಲ್ಲಿ ಪೂರ್ಣಗೊಂಡ ಪ್ರತಿ 11 ದಿನಗಳ ಸೇವೆಗೆ ಒಂದು ದಿನದ ಸವಲತ್ತು ರಜೆಯನ್ನು ಒದಗಿಸುತ್ತದೆ. ನಿಯಮ 67 ನಿವೃತ್ತಿ ಮತ್ತು ವಜಾಗೊಳಿಸುವಿಕೆ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ರಜೆಯ ಅವಧಿ ಮುಗಿಯುವುದರೊಂದಿಗೆ ವ್ಯವಹರಿಸುತ್ತದೆ. ಆದರೆ ನಿರ್ದಿಷ್ಟವಾಗಿ ವಜಾಗೊಳಿಸುವಿಕೆಯನ್ನು ಒಳಗೊಂಡಿರುವುದಿಲ್ಲ. "ದತ್ತಾರಾಮ್ ಆತ್ಮರಾಮ್ ಸಾವಂತ್ ವಿರುದ್ಧ ವಿಧರ್ಭ ಕೊಂಕಣ ಗ್ರಾಮೀಣ ಬ್ಯಾಂಕ್" ಪ್ರಕರಣವನ್ನು ಉಲ್ಲೇಖಿಸಿ, ನ್ಯಾಯಾಲಯವು ಗಳಿಕೆ/ಸವಲತ್ತು ರಜೆ ನಗದೀಕರಣವು ಆಸ್ತಿಯ ಹಕ್ಕು ಎಂದು ಪುನರುಚ್ಚರಿಸಿತು. ರಜಾ ನಗದೀಕರಣವು ಸಂಬಳಕ್ಕೆ ಹೋಲುತ್ತದೆ, ಅದು ಆಸ್ತಿಯಾಗಿದೆ. ಯಾವುದೇ ಮಾನ್ಯ ಶಾಸನಬದ್ಧ ನಿಬಂಧನೆಯಿಲ್ಲದೆ ವ್ಯಕ್ತಿಯ ಆಸ್ತಿಯನ್ನು ಕಸಿದುಕೊಳ್ಳುವುದು ಭಾರತದ ಸಂವಿಧಾನದ 300A ವಿಧಿಯ ಉಲ್ಲಂಘನೆಯಾಗುತ್ತದೆ. ಕಾನೂನುಬದ್ಧ ಅಧಿಕಾರವಿಲ್ಲದೆ ಯಾವುದೇ ವ್ಯಕ್ತಿಯನ್ನು ಅವರ ಆಸ್ತಿಯಿಂದ ವಂಚಿತನಾಗಿಸಲು ಸಾಧ್ಯವಿಲ್ಲ ಎಂದು ಸಂವಿಧಾನದ 300ಎ ವಿಧಿಯು ಆದೇಶಿಸುತ್ತದೆ ಎಂದು ಉಚ್ಛ ನ್ಯಾಯಾಲಯ ಒತ್ತಿಹೇಳಿತು.


ರಜೆಯನ್ನು ನಗದೀಕರಿಸುವುದು ಉದ್ಯೋಗಿ ಗಳಿಸಿದ ಪ್ರಯೋಜನಗಳ ಭಾಗವಾಗಿರುವುದರಿಂದ, ರಜೆಯು ಸಂಚಯವಾದ ನಂತರ ಉದ್ಯೋಗಿಯ ಆಸ್ತಿಯಾಗುತ್ತದೆ. ಹೀಗಾಗಿ, ನಿರ್ದಿಷ್ಟ ಶಾಸನಬದ್ಧ ಅಧಿಕಾರವಿಲ್ಲದೆ ಉದ್ಯೋಗದಾತರು ಅದನ್ನು ನಿರಂಕುಶವಾಗಿ ನಿರಾಕರಿಸಲು ಸಾಧ್ಯವಿಲ್ಲ. ಸ್ಪಷ್ಟ ಶಾಸನಬದ್ಧ ಬೆಂಬಲವಿಲ್ಲದೆ, ರಜೆಯನ್ನು ನಗದೀಕರಿಸುವುದು ಸೇರಿದಂತೆ ಅಂತಿಮ ಪ್ರಯೋಜನಗಳಿಗೆ ಉದ್ಯೋಗಿಯ ಹಕ್ಕನ್ನು ಕಸಿದುಕೊಳ್ಳಲು ಉದ್ಯೋಗದಾತರು ಮಾಡುವ ಯಾವುದೇ ಪ್ರಯತ್ನವು ಅಸಂವಿಧಾನಿಕವಾಗಿದೆ.


ರಜೆ ನಗದೀಕರಣ ನಿರಾಕರಣೆ ಮಾಡಿ ಬ್ಯಾಂಕ್ ಹೊರಡಿಸಿದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಲಿಂಗನಗೌಡ ಅವರ ಖಾತೆಯಲ್ಲಿರುವ 220 ದಿನಗಳ ಸಂಚಿತ ವಿಶೇಷ ಗಳಿಕೆ/ ಸವಲತ್ತು ರಜೆಯನ್ನು ನಗದೀಕರಿಸಿ ರಿಟ್ ಅರ್ಜಿದಾರರಿಗೆ ಪಾವತಿಸಲು ನಿರ್ದೇಶಿಸಿತು. ಎರಡು ತಿಂಗಳೊಳಗೆ ಪಾವತಿಯನ್ನು ಮಾಡದಿದ್ದರೆ, ಅರ್ಜಿದಾರರು ಮೊತ್ತವನ್ನು ಸ್ವೀಕರಿಸುವವರೆಗೆ ನಿಗದಿತ ದಿನಾಂಕದಿಂದ ಬ್ಯಾಂಕ್ ವಾರ್ಷಿಕ 6% ದರದಲ್ಲಿ ಬಡ್ಡಿಯನ್ನು ಪಾವತಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ತೀರ್ಪು ನೀಡಿತು.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ದ.ಕ. 





Ads on article

Advertise in articles 1

advertising articles 2

Advertise under the article