
ಚೆಕ್ ಅಮಾನ್ಯ ಪ್ರಕರಣ: ರಾಜಿ ಪತ್ರಕ್ಕೆ ಸಹಿ ಹಣ ಸ್ವೀಕರಿಸಿದ ನಂತರ ಶಿಕ್ಷೆ ಮುಂದುವರಿಸಲು ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ರಾಜಿ ಪತ್ರಕ್ಕೆ ಸಹಿ ಹಣ ಸ್ವೀಕರಿಸಿದ ನಂತರ ಶಿಕ್ಷೆ ಮುಂದುವರಿಸಲು ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್
ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರು ಎದುರುದಾರರಿಂದ ಸಂಪೂರ್ಣ ಚೆಕ್ ಮೊತ್ತವನ್ನು ಸ್ವೀಕರಿಸಿರುವುದಾಗಿ ರಾಜಿ ಪತ್ರಕ್ಕೆ ಸಹಿ ಹಾಕಿದ ನಂತರ ಶಿಕ್ಷೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಅರವಿಂದ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪಿನಿಂದ ಬಾಧಿತರಾಗಿದ್ದ ಗ್ಯಾನ್ ಚಂದ್ ಗರ್ಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿವರ:
ಹರ್ಪಾಲ್ ಸಿಂಗ್ ಅವರಿಂದ ಗ್ಯಾನ್ ಚಂದ್ ಗರ್ಗ್ ರೂ. 5,00,000/- ಸಾಲ ಪಡೆದುಕೊಂಡಿದ್ದರು. ಇದರ ಮರುಪಾವತಿಗೆ ನೀಡಲಾಗಿದ್ದ ಚೆಕ್ ಅಮಾನ್ಯಗೊಂಡು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಆರು ತಿಂಗಳ ಸಾದಾ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಸೆಷನ್ಸ್ ಕೋರ್ಟ್ ಕೂಡ ತೀರ್ಪನ್ನು ಎತ್ತಿಹಿಡಿದಿತ್ತು.
ಆರೋಪಿತರು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಕೂಡ ತಿರಸ್ಕರಿಸಿತು. ಆ ಬಳಿಕ, ಆರೋಪಿತರು ಚೆಕ್ ಮೊತ್ತವನ್ನು ಡಿ.ಡಿ. ಮೂಲಕ ದೂರುದಾರರಿಗೆ ಪಾವತಿಸಿದರು. ಈ ಪಾವತಿಯನ್ನು ಹೈಕೋರ್ಟ್ ಗಮನಕ್ಕೆ ತರಲಾಯಿತು. ಆದರೆ, ಈ ಅರ್ಜಿಯನ್ನು ಊರ್ಜಿತವಲ್ಲ ಎಂದು ಹೈಕೋರ್ಟ್ ತಿರಸ್ಕರಿಸಿತು.
ಇದರಿಂದ ಬಾಧಿತರಾದ ಅರ್ಜಿದಾರರು, ಸುಪ್ರೀಂ ಕೋರ್ಟ್ ಕದ ತಟ್ಟಿದರು. ಸೆಕ್ಷನ್ 147ರ ಪ್ರಕಾರ ಚೆಕ್ ಪ್ರಕರಣವನ್ನು ರಾಜಿ ಇತ್ಯರ್ಥಗೊಳಿಸಬಹುದು ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಬದಿಗಿರಿಸಿ ಆದೇಶ ಹೊರಡಿಸಿತು.
ಪ್ರಕರಣ: ಗ್ಯಾನ್ ಚಂದ್ ಗರ್ಗ್ ವಿರುದ್ಧ ಹರ್ಪಾಲ್ ಸಿಂಗ್
ಸುಪ್ರೀಂ ಕೋರ್ಟ್, SLP (Criminal) 8050/2025, Dated 11-08-2025