ಪತ್ನಿಗೆ ಜೀವನಾಂಶ ಒದಗಿಸಲು ನಿರಾಕರಿಸಿದ ಹೈಕೋರ್ಟ್ : ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಲಿಸಿದ ನ್ಯಾಯಪೀಠ
ಪತ್ನಿಗೆ ಜೀವನಾಂಶ ಒದಗಿಸಲು ನಿರಾಕರಿಸಿದ ಹೈಕೋರ್ಟ್ : ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಲಿಸಿದ ನ್ಯಾಯಪೀಠ
ತಮ್ಮನ್ನು ತಾವೇ ಪೋಷಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಮರ್ಥರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಚ್ಚೇದಿತ ಪತ್ನಿಗೆ ಜೀವನಾಂಶ ಒದಗಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸೌರಭ್ ಲವಣೈ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಟಿಸಿಎಸ್ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗದಲ್ಲಿ ಇರುವ ಅರ್ಜಿದಾರರು ಮಾಸಿಕ ರೂ. 73,000/- ವೇತನ ಪಡೆಯುತ್ತಿದ್ದಾರೆ ಮತ್ತು 80 ಲಕ್ಷ ರೂ. ಮೌಲ್ಯದ ಫ್ಲ್ಯಾಟ್‌ಗೆ ಬಂಡವಾಡ ಹೂಡಿದ್ದಾರೆ ಎಂಬ ಅಂಶಗಳನ್ನು ಪರಿಗಣಿಸಿ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶಿಸಲಾಗಿದ್ದ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಪಡಿಸಿದೆ.
ಪತ್ನಿಗೆ ಮಾಸಿಕ ರೂ. 15000/- ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠ, ಅವರ ಮಗುವಿನ ಪಾಲನೆಗೆ ತಿಂಗಳಿಗೆ ರೂ. 25000/- ನೀಡಬೇಕು ಎಂದು ನೀಡಿದ್ದ ನಿರ್ದೇಶವನ್ನು ಎತ್ತಿಹಿಡಿಯಿತು.
"ರಜನೀಶ್ ವಿರುದ್ಧ ನೇಹಾ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಪತ್ನಿ ಆದಾಯ ಗಳಿಸುತ್ತಿದ್ದರೆ ಅದು ಜೀವನಾಂಶ ಪಡೆಯಲು ಸಂಪೂರ್ಣ ಅಡ್ಡಿಯಾಗದು ಎಂದಿದ್ದರೂ ವೈವಾಹಿಕ ಜೀವನದ ಸಂದರ್ಭದಲ್ಲಿ ಇದ್ದ ಜೀವನ ಮಟ್ಟಕ್ಕೆ ಆ ಆದಾಯ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಇದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಸದ್ರಿ ಪರಿಸ್ಥಿತಿಯಲ್ಲಿ ಅರ್ಜಿದಾರರಿಗೆ ಸಾಕಷ್ಟು ಆದಾಯ ಇದೆ ಎಂಬುದು ಕಂಡುಬರುತ್ತದೆ. ಆಕೆಯ ಮಾಸಿಕ ಆದಾಯ ಮತ್ತು ಫ್ಲ್ಯಾಟ್ ಕೊಳ್ಳಲು ಹೊಂದಿರುವ ಆರ್ಥಿಕ ಸಾಮರ್ಥ್ಯವು ಆಕೆಯ ಜೀವನ ನಿರ್ವಹಣೆಗೆ ಸಾಕಾಗಿದೆ ಎಂದು ಮನಗಂಡ ಹೈಕೋರ್ಟ್ ನ್ಯಾಯಪೀಠ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಭಾಗಶಃ ಬದಲಿಸಿತು.