
ಅಪ್ರಾಪ್ತೆಯ ಮೇಲೆ ದೌರ್ಜನ್ಯ ಅಕ್ಷಮ್ಯ: ಆರೋಪಿಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್
ಅಪ್ರಾಪ್ತೆಯ ಮೇಲೆ ದೌರ್ಜನ್ಯ ಅಕ್ಷಮ್ಯ: ಆರೋಪಿಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್
'ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವಿವಾಹಿತ ಪುರಷನು ಲೈಂಗಿಕ ದೌರ್ಜನ್ಯವೆಸಗುವುದು ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಕೃತ್ಯ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಅಪ್ರಾಪ್ತ ವಯಸ್ಸಿನ ಯುವತಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಹಾಗೂ, ಮಹಿಳೆಯರು ಮತ್ತು ಮಕ್ಕಳ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕಾಗಿದೆ. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಸಂದೇಶ ರವಾನೆಯಾಗಬೇಕಾಗಿದೆ'' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಚಂದ್ರಪ್ಪ ಜಾಮೀನು ಕೋರಿ ಸಲ್ಲಿಸಿದ್ದರು. ಈತ ತನ್ನದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತಯನ್ನು ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ, ತನ್ನ ಆರ್ಥಿಕ ಲಾಭಕ್ಕಾಗಿ ಡಾಬಾವೊಂದರಲ್ಲಿ ಕೆಲಸಕ್ಕೆ ನಿಯೋಜಿಸಿದ್ದ ಎಂದು ಆರೋಪಿಸಲಾಗಿತ್ತು.
''ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆ ಮೇಲ್ಮನವಿದಾರರಂತಹ ಪ್ರಬಲ ವ್ಯಕ್ತಿಗಳಿಂದ ಸುಲಭವಾಗಿ ಶೋಷಣೆಗೊಳಗಾಗುತ್ತಾರೆ. ಹಾಗಾಗಿ, ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕೆಂದು ಸಮಾ ಜಕ್ಕೆ ಬಲವಾದ ಸಂದೇಶ ನೀಡಲು ಇದು ಸೂಕ್ತ ಸಮಯ,'' ಎಂದು ನ್ಯಾಯಪೀಠ ಹೇಳಿದೆ.
''ಆರೋಪಿ 37 ವರ್ಷದ ವಿವಾಹಿತನಾಗಿದ್ದಾನೆ. ಅಪ್ರಾಪ್ತಯನ್ನು ಮಾವಿನ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೆ, ಅಪ್ರಾಪ್ತೆ ಎಂಬ ವಿಷಯ ತಿಳಿದಿದ್ದರೂ ಡಾಬಾದಲ್ಲಿ ಕೆಲಸಕ್ಕೆ ನಿಯೋಜಿಸಿ, ಹಣವನ್ನೂ ಪಡೆದುಕೊಂಡಿದ್ದಾನೆ. ಆರೋಪಿಯ ಈ ನಡೆ ಕ್ಷಮಿಸಲು ಅರ್ಹವಲ್ಲದ ಕೃತ್ಯವಾಗಿದೆ'' ಎಂದು ನ್ಯಾಯಪೀಠ ಹೇಳಿದ್ದು, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.