ಕೋರ್ಟ್‌ಗೆ ಶೂರಿಟಿ ನಿಲ್ಲುವಲ್ಲೂ ವಂಚನೆ: ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿಸಿದಾತ ಅರೆಸ್ಟ್
ಕೋರ್ಟ್‌ಗೆ ಶೂರಿಟಿ ನಿಲ್ಲುವಲ್ಲೂ ವಂಚನೆ: ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿಸಿದಾತ ಅರೆಸ್ಟ್
ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಕಲಿ ದಾಖಲೆ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೋರ್ಟ್‌ನಲ್ಲಿ ಶೂರಿಟಿ ನಿಲ್ಲುವಲ್ಲೂ ವಂಚನೆ ನಡೆದಿದೆ. ಕೋರ್ಟ್‌ಗೆ ಶೂರಿಟಿ ನಿಲ್ಲಲು ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿಸಿ ವಂಚಿಸಿದ ವ್ಯಕ್ತಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲ್ಕಿ ಬಪ್ಪನಾಡು ನಿವಾಸಿ 46 ಪ್ರಾಯದ ಅಬ್ದುಲ್ ರೆಹಮಾನ್ ಹಾಗೂ ಕೊಡಿಯಾಲಬೈಲ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿಶಾಂತ್ ಬಂಧಿತ ಆರೋಪಿಗಳು.
ಈ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ವಂಚನೆಗೆ ಸಂಬಂಧಿಸಿ ಇನ್ನೂ ಎರಡು ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಲವರಿಗೆ ನಕಲಿ ಕಾರ್ಡ್‌ಗಳ ಮೂಲಕ ವಂಚಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ದಡ್ಡಲ್ ಕಾಡ್ ಎಂಬಲ್ಲಿ ಆರೋಪಿಗಳು ಕಾರ್ಯಾಚರಿಸುತ್ತಿದ್ದರು.
ಇಲ್ಲಿ ಆಧಾರ್‌ಕಾರ್ಡ್ ಮತ್ತು ಪಹಣಿ ಪತ್ರವನ್ನು ಪೋರ್ಜರಿ ಮಾಡಿ ಬೇರೆ ಬೇರೆ ಸರ್ಕಾರಿ ಕಚೇರಿಗಳಿಗೆ ಮತ್ತು ನ್ಯಾಯಾಲಯಕ್ಕೆ ನಕಲಿ ಆಧಾರ್‌ಕಾರ್ಡ್ ನೀಡಿ ವಂಚಿಸಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪೂಟರ್‌ನಲ್ಲಿ ನಂಬರ್ ಬದಲಾವಣೆ
ಕೊಡಿಯಾಲ್ ಬೈಲ್‌ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್ ಎಂಬಾತನೊಂದಿಗೆ ಸೇರಿಕೊಂಡು ಆರೋಪಿ ಅಬ್ದುಲ್ ರೆಹಮಾನ್ ಕಂಪ್ಯೂಟರ್‌ನಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಆಧಾರ್ ಕಾರ್ಡ್ ನಂಬರ್, ಹೆಸರು, ಫೋನ್ ನಂಬರ್, ವಿಳಾಸ, ಮತ್ತು ಪೋಟೋ ಎಡಿಟ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅದನ್ನು ಬೇರೆ ಬೇರೆ ಇಲಾಖೆಗಳಿಗೆ ದಾಖಲಾತಿಯಾಗಿ ನೀಡುತ್ತಿದ್ದ.
ಈ ಕಾರ್ಡ್‌ಗಳನ್ನು ನ್ಯಾಯಾಲಯದಲ್ಲಿ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡುವವರಿಗೆ ನೀಡುತ್ತಿದ್ದುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ.