-->
Trust Renewal Compulsory | 5 ವರ್ಷಕ್ಕೊಮ್ಮೆ ಟ್ರಸ್ಟ್ ನವೀಕರಣ ಕಡ್ಡಾಯ: ವಿಳಂಬಕ್ಕೆ ಭಾರೀ ದಂಡ, ನವೀಕರಿಸದಿದ್ದರೆ ಭಾರೀ ತೆರಿಗೆ

Trust Renewal Compulsory | 5 ವರ್ಷಕ್ಕೊಮ್ಮೆ ಟ್ರಸ್ಟ್ ನವೀಕರಣ ಕಡ್ಡಾಯ: ವಿಳಂಬಕ್ಕೆ ಭಾರೀ ದಂಡ, ನವೀಕರಿಸದಿದ್ದರೆ ಭಾರೀ ತೆರಿಗೆ

5 ವರ್ಷಕ್ಕೊಮ್ಮೆ ಟ್ರಸ್ಟ್ ನವೀಕರಣ ಕಡ್ಡಾಯ: ವಿಳಂಬ ಮಾಡಿದರೆ ಭಾರೀ ದಂಡ





ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಎಲ್ಲ ಟ್ರಸ್ಟ್‌ಗಳು, ದತ್ತಿ ಸಂಸ್ಥೆಗಳು (ಚಾರಿಟಬಲ್ ಟ್ರಸ್ಟ್‌ಗಳು) ಐದು ವರ್ಷಕ್ಕೊಮ್ಮೆ ನವೀಕರಣ ಮಾಡಬೇಕು. ಒಂದು ವೇಳೆ, ನವೀಕರಣ ಮಾಡದಿದ್ದರೆ ಟ್ರಸ್ಟ್ ಮಾನ್ಯತೆ ರದ್ದಾಗುತ್ತದೆ. ನವೀಕರಣಕ್ಕೆ ವಿಳಂಬ ಮಾಡಿದರೆ ಆದಾಯ ತೆರಿಗೆ ಇಲಾಖೆಗೆ ಭಾರಿ ತೆರಿಗೆ ಮೊತ್ತ ತೆರಬೇಕಾಗುತ್ತದೆ. ಟ್ರಸ್ಟ್‌ಗಳನ್ನು ಸಕಾಲದಲ್ಲಿ 12ಎ ಮತ್ತು 80ಜಿ ನೋಂದಣಿ ನವೀಕರಣ ಮಾಡಬೇಕು.


ಪ್ರತಿವರ್ಷ ನೋಟಿಸ್ ಜಾರಿ ಮಾಡಿಯೂ ನವೀಕರಿಸಲು ವಿಫಲವಾದರೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಕಳೆದುಕೊಳ್ಳಬೇಕಾಗುತ್ತದೆ. ನವೀಕರಣಗೊಳ್ಳದ ಟ್ರಸ್ಟ್‌ಗಳಿಗೆ ದಾನ ನೀಡಿದ ದಾನಿಗಳಿಗೆ ತೆರಿಗೆ ವಿನಾಯಿತಿ ಪ್ರಯೋಜನ ಸಿಗುವುದಿಲ್ಲ.


ಅಷ್ಟೇ ಅಲ್ಲ, ಇದು ಕೊಡುಗೆ ಸ್ವೀಕರಿಸುವ ಟ್ರಸ್ಟ್‌ಗಳ ಮೇಲೂ ಪರಿಣಾಮ ಬೀರಲಿದೆ. ಬಂದ ಆದಾಯಕ್ಕೆ ವರ್ಷದಿಂದ ವರ್ಷಕ್ಕೆ ತೆರಿಗೆ ಪ್ರಮಾಣ ಹೆಚ್ಚುತ್ತಿದ್ದು, ತೆರಿಗೆಯ ಜೊತೆಗೆ ಬಡ್ಡಿಯನ್ನೂ ವಿಧಿಸಲಾಗುತ್ತದೆ.


ಚಾರ್ಟರ್ಡ್‌ ಅಕೌಂಟೆಂಟ್‌ಗಳು ಅಥವಾ ಟ್ರಸ್ಟಿಗಳು ವಿನಾಯಿತಿ ಕೇಳಲು ಹೋದಲ್ಲಿ ಭಾರಿ ಮೊತ್ತದ ಹಣದ ಬೇಡಿಕೆ ಇಡಲಾಗುತ್ತಿದೆ. ಇದರಿಂದ ಹಲವು ಸಂಸ್ಥೆಗಳು ಚಟುವಟಿಕೆ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಸಾಲಿನ ನವೀಕರಣಕ್ಕಾಗಿ ನವೀಕರಣಕ್ಕಾಗಿ ಸೆಪ್ಟೆಂಬರ್ 30ಕ್ಕಿಂತ ಮೊದಲು ಅರ್ಜಿ ಸಲ್ಲಿಸಬೇಕು. ಅಸ್ತಿತ್ವದಲ್ಲಿರುವ ನೋಂದಣಿ 2026ರ ಮಾರ್ಚ್‌ 31ರ ವರೆಗೆ ಮಾತ್ರ ಮಾನ್ಯವಾಗಿರುತ್ತದೆ.


ಕಾನೂನು ಪ್ರಕಾರ, ಪ್ರಸ್ತುತ ನೋಂದಣಿ ಅವಧಿ ಮುಗಿಯುವ ಕನಿಷ್ಠ 6 ತಿಂಗಳ ಮೊದಲು ನವೀಕರಣ ಮಾಡಿಕೊಳ್ಳಬೇಕು.


ದೇಶದಲ್ಲಿ ಟ್ರಸ್ಟ್‌ಗಳು, ಸೊಸೈಟಿಗಳು ಮತ್ತು ಎನ್‌ಜಿಒಗಳಂತಹ ದತ್ತಿ ಮತ್ತು ಲಾಭರಹಿತ ಸಂಸ್ಥೆಗಳು ಆದಾಯ ತೆರಿಗೆ ಕಾಯಿದೆ-1961ರ ಸೆಕ್ಷನ್ 12ಎ ಮತ್ತು 80ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮತ್ತು ದಾನಿ ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸ ಬಹುದು. 80ಜಿಯಿಂದ ದಾನ ನೀಡುವವರು ಆದಾಯ ವಿನಾಯಿತಿ ಪಡೆಯಬಹುದು. 12ಎಯಿಂದ ಟ್ರಸ್ಟ್‌ಗಳು ಪಡೆದ ದಾನಗಳಿಗೆ ತೆರಿಗೆ ವಿನಾಯಿತಿ ಲಭಿಸುತ್ತದೆ.


ಹಿಂದೆ ಒಮ್ಮೆ ಮಾತ್ರ ನೋಂದಣಿ ಮಾಡಿದ್ದರೆ ಜೀವಿತಾವಧಿಗೆ ಆ ನೋಂದಣಿ ಮಾನ್ಯವಾಗಿರುತ್ತಿತ್ತು. 2020ರ ಹಣಕಾಸು ಕಾಯಿದೆಯಂತೆ ಪಾರದರ್ಶಕತೆ ಕಾಯ್ದುಕೊಳ್ಳಲು 2021ರಿಂದ ಪ್ರತೀ 5 ವರ್ಷಕ್ಕೊಮ್ಮೆ 12ಎ ಮತ್ತು 80ಜಿ ನೋಂದಣಿ ನವೀಕರಣ ಕಡ್ಡಾಯ ಮಾಡ ಲಾಗಿದೆ.


ಕಂಡೋನೇಷನ್ ಅವಕಾಶ: ನಿಗದಿತ ದಿನಾಂಕಕ್ಕಿಂತ ಮೊದಲು ತೆರಿಗೆದಾರರು ಫಾರ್ಮ್ 10ಎ ಸಲ್ಲಿಸದಿದ್ದರೆ, ಈಗ ತೆರಿಗೆದಾರರು ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ ಸೆಕ್ಷನ್ 12ಎ ಅಡಿಯಲ್ಲಿ ಫಾರ್ಮ್ 10ಎ ಸಲ್ಲಿಸಲು ಕ್ಷಮಾದಾನ (ಕಂಡೋನೇಷನ್) ವಿನಂತಿ ಸಲ್ಲಿಸಲು ಅವಕಾಶವಿದೆ.


ವಿಳಂಬ ಕ್ಷಮಿಸಲು ಪ್ರಧಾನ ಆಯುಕ್ತರು ಅಥವಾ ಆಯುಕ್ತರಿಗೆ ಅಧಿಕಾರ ನೀಡಲು ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಆಯುಕ್ತರು ತಿರಸ್ಕರಿಸಿದಲ್ಲಿ ಟ್ರಿಬ್ಯೂನಲ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು.


ನೋಂದಣಿ ಯಾಕೆ ಕಡ್ಡಾಯ?

ಯಾವುದೇ ಟ್ರಸ್ಟ್‌ಗಳು ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಹಿಂದೆ ಒಂದು ಬಾರಿ ಮಾತ್ರ ಸಾಕಿತ್ತು. ಈಗ 5 ವರ್ಷಕ್ಕೊಮ್ಮೆ ನವೀಕರಣ ಮಾಡಬೇಕು. ಇದರಿಂದ ಪಾರದರ್ಶಕತೆ, ಕಾನೂನು ಪಾಲನೆ ಮತ್ತು ಹೊಣೆಗಾರಿಕೆ ಹೆಚ್ಚುತ್ತಿದೆ.


ಇಲಾಖೆಯು ಟ್ರಸ್ಟ್‌ಗಳ ಚಟುವಟಿಕೆ ಮತ್ತು ಹಣಕಾಸು ದಾಖಲೆ ಪರಿಶೀಲಿಸಲು ಅನುಕೂಲವಾಗಿದೆ. ಇದು ದಾನಿಗಳು ನೀಡುವ ಕೊಡುಗೆ ಮೇಲಿನ ವಿನಾಯಿತಿ ಜತೆಗೆ ವಿಶ್ವಾಸ ಹೆಚ್ಚಿಸುತ್ತದೆ.


ನವೀಕರಣ ಹೇಗೆ..?

ಆದಾಯ ತೆರಿಗೆ ಇಲಾಖೆಯ ವಿಧಾನ ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನವೀಕರಣ ಮಾಡಬೇಕು.


ಸಂಸ್ಥೆಯ ಪ್ಯಾನ್ ನಂಬರ್ ಬಳಸಿ ಲಾಗಿನ್ ಮಾಡಬೇಕು. 'ಇ-ಫೈಲ್' ವಿಭಾಗಕ್ಕೆ ಹೋಗಿ, ಮೊದಲ ಬಾರಿಗೆ ನವೀಕರಣಕ್ಕಾಗಿ ಫಾರ್ಮ್ 10 ಮತ್ತು ಮುಂದಿನ ನವೀಕರಣಕ್ಕಾಗಿ ಫಾರ್ಮ್ 10ಬಿ ಆಯ್ಕೆ ಮಾಡಬೇಕು.


ಪ್ಯಾನ್, ನೋಂದಣಿ ಸಂಖ್ಯೆ ಮತ್ತು ಚಟುವಟಿಕೆಗಳ ಸ್ವರೂಪ ಇತ್ಯಾದಿ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.


ಡಿಜಿಟಲ್ ಸಿಗ್ನೆಚರ್ ಪ್ರಮಾಣಪತ್ರ(ಡಿಎಸ್‌ಸಿ) ಅಥವಾ ಇವಿಸಿ ಬಳಸಿ ಫಾರ್ಮ್ ಸಲ್ಲಿಸಬೇಕು. ಸಲ್ಲಿಕೆ ಬಳಿಕ ಆದಾಯ ತೆರಿಗೆ ಇಲಾಖೆಯು ಅರ್ಜಿ ಪರಿಶೀಲಿಸಿ, ತೃಪ್ತಿಯಾದರೆ 5 ವರ್ಷಕ್ಕೆ ನವೀಕೃತ ಪ್ರಮಾಣಪತ್ರ ನೀಡುತ್ತದೆ.


Ads on article

Advertise in articles 1

advertising articles 2

Advertise under the article