2ನೇ ವಿವಾಹ ಕಾನೂನುಬಾಹಿರವಾದರೂ ಅನೈತಿಕವಲ್ಲ: ಪತ್ನಿ-ಪುತ್ರನಿಗೆ ಜೀವನಾಂಶ ನೀಡಲು ಕರ್ನಾಟಕ ಹೈಕೋರ್ಟ್ ಆದೇಶ
2ನೇ ವಿವಾಹ ಕಾನೂನುಬಾಹಿರವಾದರೂ ಅನೈತಿಕವಲ್ಲ: ಪತ್ನಿ-ಪುತ್ರನಿಗೆ ಜೀವನಾಂಶ ನೀಡಲು ಕರ್ನಾಟಕ ಹೈಕೋರ್ಟ್ ಆದೇಶ
ಹಿಂದೂ ವಿವಾಹ ಕಾಯ್ದೆ ಪ್ರಕಾರ ವ್ಯಕ್ತಿಯು 2ನೇ ಮದುವೆ ಕಾನೂನು ಬಾಹಿರವಾದರೂ, ಅನೈತಿಕವಲ್ಲ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ. ಹಾಗೂ, ಎರಡನೇ ಪತ್ನಿ ಮತ್ತು ಆಕೆಯ ಮಗನಿಗೆ ಜೀವನಾಂಶ ನೀಡಲು ಪ್ರತಿವಾದಿ ಗಂಡನಿಗೆ ಆದೇಶ ನೀಡಿದೆ.
ಮೊದಲನೇ ವಿವಾಹವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿರುವ ಪತಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಪತಿಯಿಂದ ದೂರವಿದ್ದು, ಜೀವನಾಂಶ ಕೊಡಿಸಬೇಕು ಎಂದು ಕೋರಿ ಬೆಂಗಳೂರು ನಗರದ ಯಶವಂತಪುರದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ಯಾವುದೇ ವ್ಯಕ್ತಿ ತನ್ನ ಮೊದಲಿನ ವಿವಾಹದ ಬಗ್ಗೆ ಮಾಹಿತಿ ನೀಡದೆ ಎರಡನೇ ವಿವಾಹವಾದಲ್ಲಿ, ಎರಡನೇ ಪತ್ನಿ ಮತ್ತು ಆಕೆಯ ಮಕ್ಕಳ ಪೋಷಣೆಗೆ ಬದ್ಧನಾಗಿರಬೇಕು ಎಂದು ಹೇಳಿತು. ಅಲ್ಲದೇ, ಜೀವನಾಂಶದ ಉದ್ದೇಶಕ್ಕಾಗಿ ಕಾನೂನುಬದ್ಧ ಹೆಂಡತಿಯಂತೆ ಪರಿಗಣಿಸಬೇಕು ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಅಲ್ಲದೇ, ಹಿಂದೂ ವಿವಾಹ ಕಾಯ್ದೆಯ ನಿಯಮಗಳ ಪ್ರಕಾರ ಎರಡನೇ ಮದುವೆ ಅಸಿಂಧುವಾದರೂ, ಅವು ಅನೈತಿಕವಲ್ಲ. ಹೀಗಾಗಿ ಪತ್ನಿ ಆರ್ಥಿಕವಾಗಿ ಪತಿಯನ್ನು ಅವಲಂಬಿಸಿದ್ದು, ಆತನು ಪತ್ನಿ ಮಕ್ಕಳಿಗೆ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹಾಗೆಯೇ, ಜೀವನಾಂಶ ಪರಿಹಾರ ಕೋರಿರುವ ಮಹಿಳೆಗೆ 3 ಸಾವಿರ ಮತ್ತು ಆಕೆಯ 5 ವರ್ಷದ ಮಗುವಿಗೆ 2 ಸಾವಿರ ರೂಪಾಯಿಯಂತೆ ಪ್ರತಿ ತಿಂಗಳು ಜೀವನಾಂಶ ನೀಡಬೇಕು ಎಂದು ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಮಹಿಳೆ ಕೆಲ ವರ್ಷಗಳ ಹಿಂದೆ ಪ್ರತಿವಾದಿ ವ್ಯಕ್ತಿಯನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪ್ರತಿವಾದಿ ವ್ಯಕ್ತಿ ಮೊದಲ ಮದುವೆ ವಿಚಾರವನ್ನು ಆಕೆಯಿಂದ ಮರೆಮಾಚಿದ್ದರು. ಕೆಲ ದಿನಗಳ ಬಳಿಕ ಪತ್ನಿ ಗರ್ಭಿಣಿಯಾಗಿದ್ದು, ಪತಿ ಕಿರುಕುಳ ನೀಡುವುದಕ್ಕೆ ಪ್ರಾರಂಭಿಸಿದ್ದರಿಂದ ಅರ್ಜಿದಾರರು ತವರು ಮನೆಗೆ ಹೋಗಿ ಜೀವನ ನಡೆಸುತ್ತಿದ್ದರು. ಈ ನಡುವೆ ತನಗೆ ಹಾಗೂ ಮಗುವಿನ ಪೋಷಣೆಗೆ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತಿಗೆ ಎರಡು ಎಕರೆಗೂ ಹೆಚ್ಚು ಜಮೀನಿದೆ. ಈ ಜಮೀನಿನಲ್ಲಿ ಅಡಕೆ ಬೆಳೆಯುತ್ತಿದ್ದು, ಮಾಸಿಕ 20 ಸಾವಿರಕ್ಕೂ ಹೆಚ್ಚು ಲಾಭವಿದೆ. ಅಲ್ಲದೆ, ಪತಿ ದೇವಾಲಯವೊಂದರಲ್ಲಿ ಅರ್ಚಕರಾಗಿದ್ದು, 10 ಸಾವಿರಕ್ಕೂ ಹೆಚ್ಚು ದುಡಿಯುತ್ತಿದ್ದಾರೆ. ಹೀಗಾಗಿ ತನ್ನ ಜೀವನಕ್ಕಾಗಿ 5 ಸಾವಿರ ಮತ್ತು ಮಗನ ಶಿಕ್ಷಣಕ್ಕಾಗಿ 2,500 ರೂಪಾಯಿಗಳನ್ನು ಜೀವನಾಂಶವಾಗಿ ನೀಡುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ಪುತ್ರನಿಗೆ ಪ್ರತಿವಾದಿಯೇ ತಂದೆಯಾಗಿದ್ದಾರೆ. ಇದಕ್ಕಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಜೀವನಾಂಶ ಕೊಡಲು ನಿರ್ದೇಶಿಸಬೇಕು ಎಂದು ಕೋರಿದ್ದರು. ಇದಕ್ಕೆ ಪತಿಯ ಪರ ವಕೀಲರು ಆಕ್ಷೇಷ ವ್ಯಕ್ತಪಡಿಸಿ ನಿರಾಕರಿಸಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಜೀವನಾಂಶ ನೀಡಲು ಆದೇಶಿಸಿದೆ.